ಮಂಗಳೂರು: ಮನೆಯ ಲಾಕರಿನಲ್ಲಿಟ್ಟಿದ್ದ ಅಂದಾಜು ಒಂದು ಕೋಟಿ ಮೌಲ್ಯದ ಒಂದು ಕೇಜಿಯಷ್ಟು ಚಿನ್ನಾಭರಣ ಕಳವಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಜಪೆ ಸಮೀಪದ ಪೆರ್ಮುದೆ ನಿವಾಸಿ, ಕುವೈಟ್ ಉದ್ಯೋಗಿ ಜೋಸೆಫ್ ಪಿಂಟೋ ಎಂಬವರ ಮನೆಯಲ್ಲಿ ಕಳ್ಳತನ ಆಗಿದ್ದು ಮನೆ ನೋಡಿಕೊಳ್ಳುತ್ತಿದ್ದ ಕೇರಳ ಮೂಲದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೋಸೆಫ್ ಪಿಂಟೋ ಅವರ ಕುಟುಂಬ ಕುವೈಟ್ ನಲ್ಲಿ ನೆಲೆಸಿದ್ದು ವರ್ಷಕ್ಕೊಮ್ಮೆ ಪೆರ್ಮುದೆಯ ಮನೆಗೆ ಬರುತ್ತಿದ್ದರು. ಮನೆಯ ಲಾಕರಿನಲ್ಲಿದ್ದ ಒಂದು ಕೆ.ಜಿ ಬಂಗಾರ ಕಳವಾಗಿರೋದು ಮಂಗಳವಾರ ತಿಳಿದುಬಂದಿದ್ದು ದಂಪತಿ ಪೊಲೀಸ್ ದೂರು ನೀಡಿದ್ದಾರೆ.
ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ಕುವೈಟ್ ನಲ್ಲಿ ನೆಲೆಸಿದ್ದಾರೆ. ಅವರ ಪೆರ್ಮುದೆಯ ಮನೆಯಲ್ಲಿ ಸದ್ಯ ಯಾರೂ ವಾಸವಿರಲಿಲ್ಲ. ಮನೆಯ ರಕ್ಷಣೆಗಾಗಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಮತ್ತು ಮುಧೋಳ, ಜರ್ಮನ್ ಶೆಫರ್ಡ್ ತಳಿಗಳು ಸೇರಿದಂತೆ ಒಟ್ಟು 8 ಕಾವಲು ನಾಯಿಗಳನ್ನು ಸಾಕಲಾಗಿತ್ತು. ಇಷ್ಟೆಲ್ಲಾ ಬಿಗಿ ಭದ್ರತೆ ಇದ್ದರೂ, ಕಳ್ಳರು ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗಿದ್ದಾರೆ.
ಲಾಕರ್ ಕೀ ಬಳಸಿ ಕಳ್ಳತನ – ಒಳಗಿನವರ ಕೈವಾಡದ ಶಂಕೆ? : ಅತ್ಯಂತ ಆತಂಕಕಾರಿ ಮತ್ತು ಅನುಮಾನಾಸ್ಪದ ವಿಷಯವೆಂದರೆ, ಕಳ್ಳರು ಚಿನ್ನಾಭರಣಗಳಿದ್ದ ಲಾಕರ್ ಅನ್ನು ಬಲವಂತವಾಗಿ ಮುರಿದಿಲ್ಲ. ಬದಲಾಗಿ, ಲಾಕರ್ನ ಕೀಲಿಯನ್ನೇ ಬಳಸಿ ಅದನ್ನು ತೆರೆದು, ಒಳಗಿದ್ದ ಚಿನ್ನಾಭರಣ ಮತ್ತು ವಾಚ್ಗಳನ್ನು ದೋಚಿದ್ದಾರೆ. ಲಾಕರ್ನ ಕೀಲಿ ಕಳ್ಳರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದು ಮನೆಯ ಆಪ್ತರು ಅಥವಾ ಕೆಲಸದವರೇ ನಡೆಸಿದ ಕೃತ್ಯವಾಗಿರಬಹುದೇ ಎಂಬ ಸಂಶಯವನ್ನು ಬಲಪಡಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಳ್ಳರು ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದ ಜಾಗದಿಂದ ಬಂದಿದ್ದಾರೆ. ಕೆಲವು ಕ್ಯಾಮೆರಾಗಳ ದಿಕ್ಕನ್ನು ಬದಲಿಸಿ, ನಂತರ ಮನೆಯ ಕಿಟಕಿಯೊಂದರ ಕಬ್ಬಿಣದ ಸರಳುಗಳನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಆಶ್ಚರ್ಯಕರವಾಗಿ, 8 ಕಾವಲು ನಾಯಿಗಳಿದ್ದರೂ ಅವುಗಳ ಗಮನಕ್ಕೆ ಬಾರದಂತೆ ಅಥವಾ ಅವುಗಳನ್ನು ನಿಷ್ಕ್ರಿಯಗೊಳಿಸಿ ಕಳ್ಳರು ತಮ್ಮ ಕೆಲಸ ಮುಗಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post