ಪುತ್ತೂರು : ಪುತ್ತೂರು ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತೆ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೃಷ್ಣ ಜೆ ರಾವ್ ಎನ್ನುವಾತ ಮದುವೆಯಾಗುವುದಾಗಿ ಯುವತಿಗೆ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಯುವತಿ ಗರ್ಭಿಣಿಯಾಗಿರುವುದು ಗೊತ್ತಾಗುತ್ತಿದ್ದಂತೆಯೇ ಕೈಕೊಟ್ಟಿದ್ದಾನೆ. ಯುವಕ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಯುವತಿಯ ತಾಯಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ, ಸೋಮವಾರ ಮಾಧ್ಯಮಗಳ ಮುಂದೆ ಬಂದು ನ್ಯಾಯಕ್ಕಾಗಿ ಅಳಲು ತೋಡಿಕೊಂಡಿದ್ದಾರೆ.
ಯುವಕನಿಗೆ ನನ್ನ ಮಗಳೊಂದಿಗೆ ಲವ್ ಇತ್ತು. ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕದ ದಿನಗಳಲ್ಲಿಯೂ ಈ ಪ್ರೀತಿ ಮುಂದುವರಿದು ದೈಹಿಕ ಸಂಪರ್ಕದವರೆಗೂ ಸಾಗಿದೆ. ಆದರೆ, ಮಗಳು ಗರ್ಭಿಣಿಯಾದ ಏಳು ತಿಂಗಳ ಬಳಿಕ ನಮಗೆ ವಿಚಾರ ತಿಳಿಯಿತು. ಗರ್ಭಿಣಿಯಾಗಿರುವ ವಿಚಾರ ಆ ಯುವಕನೇ ನಮ್ಮಲ್ಲಿಗೆ ಬಂದು ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಮದುವೆ ಮಾಡಿಸುವ ಬಗ್ಗೆ ಮಾತು ನೀಡಿದ್ದರು. ಗರ್ಭಿಣಿಯಾಗಿದ್ದರಿಂದ ಒಂದು ದಿನ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಯುವಕನ ಕಡೆಯವರು ಒತ್ತಾಯಿಸಿದ್ದರು. ಆಕೆಗೆ 7 ತಿಂಗಳಾಗಿದ್ದರಿಂದ ಮಗಳಿಗೆ ತೊಂದರೆ ಆಗುವ ಲಕ್ಷಣ ಕಂಡು ನಾವು ಹಿಂಜರಿದೆವು. ಈ ಕುರಿತು ನಾನು ಪೊಲೀಸರಿಗೆ ದೂರು ನೀಡಲು ಮುಂದಾದಾಗ ನನ್ನ ಗಂಡ ದೂರು ಕೊಡುವುದು ಬೇಡ, ಮದುವೆ ಮಾಡಿಕೊಡಬಹುದು ಎಂದಿದ್ದರು.
ಆದರೆ, ಅವರ ನಡವಳಿಕೆ ಸಂಶಯವಿದ್ದರಿಂದ ನಾನು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಆ ಸಂದರ್ಭ ಹುಡುಗನನ್ನು ಪೊಲೀಸರು ಕರೆಸಿದ್ದರು. ಆಗ ಮತ್ತೆ ಶಾಸಕರ ಪ್ರವೇಶವಾಗಿ ಮದುವೆಯ ರಾಜಿ ಪಂಚಾಯತಿ ನಡೆಸಲಾಯಿತು. ಯುವಕನ ತಂದೆ ತನ್ನ ಮಗನಿಗೆ 21 ವರ್ಷ ಆದ ಬಳಿಕ ರಿಜಿಸ್ಟರ್ ಮದುವೆ ಮಾಡಿಸುವುದಾಗಿ ಒಪ್ಪಿಕೊಂಡಿದ್ದರಿಂದ ಹಾಗೂ ಶಾಸಕರು ಹೇಳಿದ್ದರಿಂದ ದೂರು ನೀಡಲಿಲ್ಲ. ಠಾಣೆಯಲ್ಲಿ ಕೇವಲ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ, ಜೂ.23ಕ್ಕೆ ಯುವಕನಿಗೆ 21 ವರ್ಷ ಆದ ಬಳಿಕ ಮದುವೆ ಆಗುವಂತೆ ಕೇಳಿದೆವು. ಒಪ್ಪದಿದ್ದಾಗ ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸುವಂತೆ ಹೇಳಿದರು.
ಈ ನಡುವೆ ಯುವಕನ ಕಡೆಯವರು ನಮ್ಮೊಂದಿಗೆ ಬಂದು ಮಾತುಕತೆ ನಡೆಸಿ ಹಲವು ರೀತಿಯಲ್ಲಿ ಮಗಳ ಮೇಲೆಯೇ ಸಂಶಯದ ರೀತಿಯಲ್ಲಿ ಪ್ರಶ್ನೆ ಮಾಡಿದರು. ಮಗು ನನ್ನದಲ್ಲ ಎಂದು ಹುಡುಗನೇ ಹೇಳಿ ಆಕೆ ಮೇಲೆ ಹಲ್ಲೆಗೂ ಯತ್ನಿಸಿದ. ಮಾತುಕತೆಗೆ ಬಂದವರು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಈ ನಡುವೆ ಹಣದ ಬೇಡಿಕೆ ಸಹ ಇಟ್ಟಿದ್ದು, ನಾನು 10 ಲಕ್ಷವಲ್ಲ 1 ಕೋಟಿ ಕೊಟ್ಟರು ನ್ಯಾಯ ಸಿಗದೆ ಬಿಡುವುದಿಲ್ಲ ಎಂದಿರುವೆ. ಹಾಗಾಗಿ ನನ್ನ ಮಗಳನ್ನು ಮದುವೆ ಆಗಲು ಒಪ್ಪದ ಯುವಕನ ವಿರುದ್ಧ ಜೂ.24ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದೇನೆ. ಯುವಕ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದು, ಆದರೆ, ಆತನನ್ನು ಮನೆಯವರೇ ಮುಚ್ಚಿಟ್ಟಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿದರು.
ಸಂತ್ರಸ್ತ ಯುವತಿಯ ತಾಯಿ ಜೂ. 24ರಂದು ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಯುವಕ ವಿರುದ್ಧ ಅ.ಕ್ರ 49/2025, ಕಲಂ:64(1), 69 ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಫಿರ್ಯಾದಿದಾರರಾದ ಸಂತ್ರಸ್ತ ಯುವತಿ ಹಾಗೂ ಆಕೆಯ ಸಹಪಾಠಿಯಾದ ಆರೋಪಿತನು ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಆರೋಪಿಯು ಪಿರ್ಯಾದಿದಾರರನ್ನು ತನ್ನ ಮನೆಗೆ ಕರೆಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಫಿರ್ಯಾದಿದಾರರು ಗರ್ಭಿಣಿಯಾಗಿದ್ದು, ಈ ಬಗ್ಗೆ ಫಿರ್ಯಾದಿದಾರರು ಅರೋಪಿಗೆ ತಿಳಿಸಿದಾಗ ಆರೋಪಿಯು ಮದುವೆಯಾಗಲು ನಿರಾಕರಿಸಿರುತ್ತಾನೆ. ಈ ಬಗ್ಗೆ ಫಿರ್ಯಾದಿ 24ರಂದು ನೀಡಿದ ದೂರಿನ ಮೇರೆಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಅ.ಕ್ರ 49/2025, ಕಲಂ:64(1), 69 ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post