ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಕಾರಿನಲ್ಲಿ ಬಂದೂಕು, ಸ್ಫೋಟಕ ಸಾಮಗ್ರಿ ಸಾಗಾಟ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಆರೋಪಿಯನ್ನು ಸಿಐಎಸ್‌ಎಫ್ ಭದ್ರತಾ ಸಿಬಂದಿ ಬಂಧಿಸಿದ್ದಾರೆ.
ಉಡುಪಿ ಬ್ರಹ್ಮಾವರ ಮೂಲದ ರೆನಾಲ್ಡ್ ಡಿಸೋಜ(24) ಬಂಧಿತ ಯುವಕ. ಈತ ವಿದೇಶದಿಂದ ಬಂದಿದ್ದ ತನ್ನ ಸಂಬಂಧಿಕ ವ್ಯಕ್ತಿಯನ್ನು ಕಾರಿನಲ್ಲಿ ಕರೆದೊಯ್ಯಲು ಏರ್ಪೋಟ್‌ರ ಆವರಣಕ್ಕೆ ಬಂದಿದ್ದ. ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಿದ್ದಾಗ ಸಿಐಎಸ್‌ಎಫ್ ಭದ್ರತಾ ಸಿಬಂದಿ ತಪಾಸಣೆ ಸಂದರ್ಭ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ, ಕಾರಿನ ಮುಂಭಾಗದಲ್ಲಿ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಸ್ಫೋಟಕ ಸಾಮಗ್ರಿ ಪತ್ತೆಯಾಗಿದ್ದು ಈ ಬಗ್ಗೆ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಗನ್ ಹೊಂದಿರುವುದಕ್ಕೆ ಲೈಸನ್ಸ್ ಇಲ್ಲದ ಕಾರಣ ಯುವಕನನ್ನು ಭದ್ರತಾ ಸಿಬಂದಿ ವಶಕ್ಕೆ ಪಡೆದಿದ್ದು, ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಕೋರ್ಟಿಗೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.