ಆಂಟಿಗುವಾ: 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ 96 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೆದೆಬಡಿದು ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಸತತ ನಾಲ್ಕನೇ ಹಾಗೂ ಒಟ್ಟಾರೆ 8ನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದೆ.
ನಾಯಕ ಯಶ್ ಧುಲ್ (110) ಶತಕ ಮತ್ತು ಶೇಖ್ ರಶೀದ್ ಅವರ 94 ರನ್ ಗಳ ನೆರವಿನಿಂದ ಭಾರತ 50 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 290 ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 41.5 ಓವರ್‌ಗಳಲ್ಲಿ 194 ರನ್ ಗಳಿಸುವಷ್ಟರಲ್ಲೇ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ಲಾಚ್ಲಾನ್ ಶಾ ಅತ್ಯಧಿಕ 51 ರನ್ ಗಳಿಸಿದ್ರೆ ಭಾರತದ ಪರ ವಿಕಿ ಓಸ್ಟ್ವಾಲ್ ಮೂರು ವಿಕೆಟ್ ಪಡೆದರು. ಭಾರತದ ಕ್ಯಾಪ್ಟನ್ ಯಶ್ ಧುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೆ.5ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ರವಿಕುಮಾರ್, ಟೀಗ್ ವೈಲಿ (1) ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಮುನ್ನಡೆ ನೀಡಿದರು. ಕೋರಿ ಮಿಲ್ಲರ್ (38) ವಿಕೆಟನ್ನು ರಘುವಂಶಿ ಪಡೆದರು. ವಿಕ್ಕಿ ಒಸ್ತ್ವಾಲ್, ಕ್ಯಾಂಪ್‌ಬೆಲ್ (30) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಕ್ಯಾಪ್ಟನ್ ಕೂಪರ್ ಕ್ಯಾನೋಲಿ (3) ನಿಶಾಂತ್ ಸಿಂಧುಗೆ ಬಲಿಯಾದರು. ಇದಾದ ಬಳಿಕ ಕಾಂಗರೂ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿತು. 110 ರನ್ ಗಳಿಸಿದ್ದಾಗ ನಾಯಕ ಯಶ್ ಧುಲ್ ರನೌಟ್ ಆದರು. ಶೇಖ್ ರಶೀದ್ 94 ರನ್ ಗಳಿಸಿದರು. ದಿನೇಶ್ ಬಾನಾ 4 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಔಟಾಗದೆ 20 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 27 ರನ್‌ಗಳು ಬಂದವು. ನಿಶಾಂತ್ ಸಿಂಧು 12 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ ತನ್ನ ಮೊದಲ ಎರಡೂ ವಿಕೆಟ್‌ಗಳನ್ನು 37ಕ್ಕೆ ಕಳೆದುಕೊಂಡಿತ್ತು. ಇದಾದ ನಂತರ ರಶೀದ್ ಮತ್ತು ಧುಲ್ 204 ರನ್‌ಗಳ ಜೊತೆಯಾಟ ಭಾರತ ಬೃಹತ್ ಇನ್ನಿಂಗ್ಸ್ ಕಟ್ಟುವಲ್ಲಿ ನೆರವಾಯಿತು. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಭಾರತದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಯಶ್ ಧುಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್ ಈ ಸಾಧನೆ ಮಾಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post