ಕೊಚ್ಚಿ, ಫೆ 2: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸುದ್ದಿಯಾಗಿತ್ತು. ಆದರೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಬಾಲಕನಿಗೆ ಶಾಲೆಯಲ್ಲಿ ಭಯಾನಕವಾಗಿ ರ‍್ಯಾಗಿಂಗ್ ಮಾಡಲಾಗಿತ್ತು ಎಂದು ಆತನ ತಾಯಿ ಆರೋಪಿಸಿದ್ದಾರೆ. ಟಾಯ್ಲೆಟ್ ಸೀಟ್ ನೆಕ್ಕುವಂತೆ ಮಾಡಿದ್ದಲ್ಲದೆ, ಫ್ಲಷ್ ಮಾಡುವಾಗ ಕಮೋಡ್ನಲ್ಲಿ ಆತನ ತಲೆಯನ್ನು ಮುಳುಗಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. 15 ವರ್ಷದ ವಿದ್ಯಾರ್ಥಿ ಮಿಹಿರ್ ಅಹ್ಮದ್ ಕೆಲವು ದಿನಗಳ ಹಿಂದೆ 26ನೇ ಮಹಡಿಯ ಫ್ಲಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇದೀಗ ಆತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಇದೀಗ ತನ್ನ ಮಗನ ಸಾವಿಗೆ ನ್ಯಾಯಬೇಕೆಂದು ತಾಯಿ ಸಿಎಂ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಘಟನೆ ಹಿಂದಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗನ ಸಾವಿಗೆ ಕಾರಣವೇನು ಎನ್ನುವುದನ್ನು ತಾಯಿ ರತ್ನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ? : ಮಗನ ಮರಣದ ನಂತರ, ಮಿಹಿರ್ ಏಕೆ ಅಂತಹ ಕಠಿಣ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಪತಿ ಮತ್ತು ನಾನು ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆವು. ಅವರ ಸ್ನೇಹಿತರು, ಸಹಪಾಠಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಪರಿಶೀಲಿಸುವ ಮೂಲಕ ನಾವು ಅವನು ಅನುಭವಿಸಿದ ಭಯಾನಕ ವಾಸ್ತವ ನಮಗೆ ತಿಳಿಯಿತು. ಅವನು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿನ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರಾಗಿಂಗ್, ಬೆದರಿಸುವಿಕೆ ಮತ್ತು ದೈಹಿಕ ಹಲ್ಲೆಗೆ ಒಳಗಾಗಿದ್ದ ಎಂದು ತಾಯಿ ಆರೋಪಿಸಿದ್ದಾರೆ.
ನನ್ನ ಮಗನನ್ನು ಅವಾಚ್ಯವಾಗಿ ನಿಂದಿಸಲಾಗಿತ್ತು. ಅವನ ಕೊನೆಯ ದಿನವೂ ಊಹಿಸಲಾಗದ ಅವಮಾನವನ್ನು ಎದುರಿಸಿದ್ದ. ಅವನನ್ನು ಬಲವಂತವಾಗಿ ವಾಶ್ ರೂಂಗೆ ಕರೆದೊಯ್ದು, ಟಾಯ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಿದ್ದರು. ಟಾಯ್ಲೆಟ್ ಫ್ಲಶ್ ಮಾಡುವಾಗ ತಲೆಯನ್ನು ಟಾಯ್ಲೆಟ್ ಕಮೋಡ್ ಒಳಕ್ಕೆ ತಳ್ಳಲಾಗಿತ್ತು. ಈ ಕ್ರೌರ್ಯದ ಕೃತ್ಯಗಳು ಅವನನ್ನು ಕುಗ್ಗಿಸಿತ್ತು. ಈ ಎಲ್ಲಾ ಕಾರಣದಿಂದ ಅವನು ಈ ರೀತಿಯ ನಿರ್ಧಾರಕ್ಕೆ ಬಂದಿದ್ದ ಎಂದು ಮಿಹಿರ್‌ನ ತಾಯಿ ಆರೋಪಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post