ಮಂಗಳೂರು: ‘ನವರಸರಾಜೇ’ ಖ್ಯಾತಿಯ ಭೋಜರಾಜ ವಾಮಂಜೂರು ನಾಯಕ ನಟನಾಗಿ ಅಭಿನಯಿಸಿದ ‘ಭೋಜರಾಜ್ ಎಂಬಿಬಿಎಸ್’ ಸಿನಿಮಾವು ಕರಾವಳಿಯಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ಮೇ 6ರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರದರ್ಶನ ಕಾಣಲಿದೆ’ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದರ್ಬಾರ್ ಸಿನಿಮಾಸ್‌ನಲ್ಲಿ ಪ್ರಭಾ ಎನ್. ಸುವರ್ಣ ಮತ್ತು ನಾರಾಯಣ ಸುವರ್ಣ ಅರ್ಪಿಸಿ, ರಫೀಕ್ ದರ್ಬಾರ್ ನಿರ್ಮಾಣದ ಪರ್ವೇಜ್ ಬೆಳ್ಳಾರೆ, ಶರಣ್‌ರಾಜ್ ಸುವರ್ಣ ಸಹ ನಿರ್ಮಾಣದ ‘ಭೋಜರಾಜ್ ಎಂಬಿಬಿಎಸ್’ ಚಿತ್ರವು ಕರಾವಳಿಯಾದ್ಯಂತ 50 ದಿನಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಈ ಚಿತ್ರವನ್ನು ಕೊಲ್ಲಿ ರಾಷ್ಟ್ರಗಳಲ್ಲಿರುವ ತುಳುವರ ಅಪೇಕ್ಷೆಯ ಮೇರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ದುಬೈ, ಶಾರ್ಜಾ ಮತ್ತು ಅಬುದಾಬಿಯ 6 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಮೇ 20ರಿಂದ ಕತಾರ್, ಕುವೈಟ್, ಒಮನ್, ಬಹರೈನ್, ಸೌದಿ ಅರೇಬಿಯಾದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈ ಭಾಗದಲ್ಲಿರುವ ತುಳುವರು ನಮ್ಮ ನೆಲದ ಸೊಗಡಿನ ತುಳು ಭಾಷೆಯ ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.
ನಿರ್ದೇಶಕ, ನಟ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ‘ತುಳು ಚಿತ್ರರಂಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಜ್ಯೋತಿ ಚಿತ್ರಮಂದಿರ ಮುಚ್ಚಿದ ಬಳಿಕ ತುಳು ಸಿನಿಮಾಕ್ಕೆ ಸರಿಯಾದ ಚಿತ್ರಮಂದಿರವೂ ಇಲ್ಲವಾಗಿದೆ. ತುಳು ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬರುವ ಗ್ಯಾರಂಟಿಯೂ ಇಲ್ಲವಾಗಿದೆ. ತುಳು ಚಿತ್ರವನ್ನು ಗೆಲ್ಲಿಸುವುದು, ಸೋಲಿಸುವುದು ತುಳುವರ ಕೈಯಲ್ಲಿದೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post