ಬೆಂಗಳೂರು: ಬೇಸಿಗೆಯ ತಾಪಕ್ಕೆ ಅತ್ಯವಶ್ಯಕವಾದ ನಿಂಬೆಹಣ್ಣಿನ ಬೆಲೆ ಏರಿಕೆಯಾಗಿದ್ದು, ಇದೀಗ ಟೊಮ್ಯಾಟೊ ಸಹ ಕಿಲೋಗೆ 75-80 ರೂ. ಏರಿಕೆಯಾಗಿದೆ. ಹಣದುಬ್ಬರ ಮತ್ತು ಕಡಿಮೆ ಇಳುವರಿ ಕೇವಲ ದೇಶೀಯ ಬಳಕೆಗೆ ಹೊಡೆತ ನೀಡುವುದರ ಜೊತೆಗೆ ರಫ್ತಿನ ಮೇಲೂ ಪರಿಣಾಮ ಬೀರಿದೆ. ಹಾಪ್‌ಕಾಮ್ಸ್ ಔಟ್‌ಲೆಟ್‌ಗಳಲ್ಲಿ ಪ್ರತಿ ಅಡುಗೆ ಅತ್ಯಗತ್ಯ ಪದಾರ್ಥ ಟೊಮ್ಯಾಟೊ ಬೆಲೆ ಈಗ 62-64 ರೂಪಾಯಿ ಆಗಿದ್ದು ಒಂದು ದಿನದಲ್ಲಿ ಬೆಲೆ 10 ರೂ.ಗಳಷ್ಟು ಏರಿಕೆಯಾಗಿದೆ. ಟೊಮ್ಯಾಟೊ ಬೆಲೆ ಏರಿಕೆ ಆಹಾರ ಯೋಜನೆಯಿಂದ ಅದನ್ನು ಹೊರಗಿಡುವಂತೆ ಮಾಡುವಂತಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಸಹ ಜಾಸ್ತಿಯಾಗುತ್ತಿರುವುದರ ಜೊತೆಗೆ ಸಾಂಬಾರ್, ರಸಂ ಮತ್ತು ಇತರ ಕರಿಗಳಂತಹ ತಯಾರಿಗೆ ಟೊಮ್ಯಾಟೊ ಅತ್ಯಗತ್ಯವಾದ ಕಾರಣ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಸಂಘಗಳು ತಮ್ಮ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಈಗಾಗಲೇ ಯೋಚಿಸುತ್ತಿವೆ. ‘ಕಳೆದ ತಿಂಗಳು, ಒಂದು ಕಿಲೋ ಟೊಮೆಟೊವನ್ನು 2-3 ರೂ.ಗೆ ಮಾರಾಟ ಮಾಡಲಾಗಿತ್ತು. ಇದರಿಂದ ಕನಿಷ್ಠ ಬೆಲೆಯೂ ಸಿಗದೆ ರೈತ ಕಂಗಾಲಾಗಿದ್ದರು. ಇನ್ನು ಕೂಲಿಕಾರರು ಸಿಗದ ಕಾರಣ ಟೊಮ್ಯಾಟೊವನ್ನು ರಸ್ತೆಗೆ ಎಸೆದಿದ್ದರು. ಆದರೆ ಇದೀಗ ಪೂರೈಕೆ ಸ್ಥಗಿತಗೊಂಡಾಗ, ಬೇಡಿಕೆ ಹೆಚ್ಚಾಗುತ್ತಿದ್ದು ಹೀಗಾಗಿ ಬೆಲೆಯಲ್ಲಿ ಹಠಾತ್ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್-ಮೇ ಅವಧಿಯಲ್ಲಿ ದರಗಳು ಹೆಚ್ಚಾಗುತ್ತವೆ. ಆದರೆ ಅದು 50-55 ರೂ.ಗೆ ಕೊನೆಯಾಗುತ್ತಿತ್ತು. ಆದರೆ ಈಗ ಅದು 80 ರೂ.ಗೆ ಏರುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದೆ. ತಾಜಾ ಬೆಳೆಗಳು ಮಾರುಕಟ್ಟೆಗೆ ಬರುವವರೆಗೆ ಮುಂದಿನ 2-3 ತಿಂಗಳುಗಳವರೆಗೆ ಬೆಲೆ ಹೆಚ್ಚಾಗಿರುತ್ತದೆ ಎಂದು ಟೊಮೆಟೊ ಬೆಳೆಗಾರ ನಾರಾಯಣಗೌಡ ಹೇಳಿದ್ದಾರೆ. ಟೊಮ್ಯಾಟೊ ಹಣ್ಣಾಗಲು ಮೂರು ತಿಂಗಳು ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ಟೊಮೆಟೊ ಬೆಳೆಯುವ ಪ್ರಮುಖ ಪ್ರದೇಶಗಳು ಕೋಲಾರ, ಮುಳಬಾಗಲು, ಕೆಜಿಎಫ್, ಚಿಂತಾಮಣಿ, ಸಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ.