ಮಂಗಳೂರು, ಜು.3: ಮಳೆಗಾಲದಲ್ಲಿ ಸಂಭವಿಸುವ ಅನಾಹುತವನ್ನು ತಪ್ಪಿಸುವ ಉದ್ದೇಶಕ್ಕಾಗಿ ಮುಂದಿನ ಸೆಪ್ಟೆಂಬರ್ ತನಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಅಗೆತ, ಕಟ್ಟಡ ನಿರ್ಮಾಣ ನಿಷೇಧ ಮಾಡಬೇಕೆಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಅವೈಜ್ಞಾನಿಕವಾಗಿ ಭೂ ಅಗೆತ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದರಿಂದ ಭೂಕುಸಿತ ಉಂಟಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗುತ್ತಿದ್ದು ಜೀವ ಹಾನಿಯೂ ಆಗುತ್ತಿದೆ. ಇದರಿಂದಾಗಿ ಮಳೆಯ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಟ್ಟಡ ಕಾಮಗಾರಿಯನ್ನು ನಡೆಸದಂತೆ ಹಾಗೂ ಈಗಾಗಲೇ ಆರಂಭಿಸಿರುವ ಕಟ್ಟಡ ಕಾಮಗಾರಿಗಳನ್ನು ಮುನ್ನೆಚ್ಚರಿಕೆ ವಹಿಸಿಕೊಂಡು ನಡೆಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಯಾವುದೇ ರೀತಿ ನಿಮಯ ಉಲ್ಲಂಘನೆ ಕಂಡುಬಂದಲ್ಲಿ ನಿಪತ್ತು ನಿರ್ವಹಣಾ ಕಾಯ್ದೆಯಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ನಗರ ಮಧ್ಯದ ಬಲ್ಮಠದಲ್ಲಿ ಕಟ್ಟಡದ ತಳಪಾಯ ಕಾಮಗಾರಿ ನಡೆಸುತ್ತಿರುವಾಗಲೇ ಪಕ್ಕದ ಧರೆ ಕುಸಿದು ಇಬ್ಬರು ಕಾರ್ಮಿಕರು ಸಿಲುಕಿದ್ದಲ್ಲದೆ, ಆ ಪೈಕಿ ಒಬ್ಬ ಕಾರ್ಮಿಕ ದುರಂತ ಸಾವಿಗೀಡಾದ ದುರಂತ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಟ್ಟಡ ಕಾಮಗಾರಿ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.
ಸ್ಮಾರ್ಟ್‌ಸಿಟಿ ಯೋಜನೆಯ ಜಲಾಭಿಮುಖಿ ಯೋಜನೆಯಡಿ ನಿರ್ಮಿಸಿರುವ ತಡೆಗೋಡೆ ಒಂದು ಭಾಗದಲ್ಲಿ ಕುಸಿದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ (ಎನ್‌ಜಿಟಿ) ಪ್ರಕರಣ ಇರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆಗಸ್ಟ್ 2ಕ್ಕೆ ಇದರ ವಿಚಾರಣೆ ಇದ್ದು, ತೀರ್ಪು ಪಾಲಿಕೆ ಪರ ಬರಲಿದೆ ಎಂದು ಸುಧೀರ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post