ಬೆಳ್ತಂಗಡಿ, ಆಗಸ್ಟ್ 4: ಉಜಿರೆಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಪ್ರತಿಭಟನೆಯಲ್ಲಿ ಸೌಜನ್ಯಾ ಪೋಷಕರಿಗೆ ಹಲ್ಲೆಗೆ ಯತ್ನಿಸಿದ ಬಗ್ಗೆ ದೂರು ದಾಖಲಾಗಿದ್ದು, ಧರ್ಮಸ್ಥಳ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದ ನೇತೃತ್ವದಲ್ಲಿ ಧರ್ಮಸ್ಥಳದ ವಿರುದ್ದ ಧರ್ಮಾಧಿಕಾರಿ ಡಾ ಡಿ ವೀರೇಂದ್ರಹೆಗ್ಗಡೆಯವರ ವಿರುದ್ದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸೌಜನ್ಯ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯ ಬಳಿಕ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಎಸ್.ಡಿಎಂ ಕಾಲೇಜಿನ ವರೆಗೆ ಮೆರವಣಿಗೆ ನಡೆಯಿತು
ಎಸ್. ಡಿ.ಎಂ ಕಾಲೇಜಿನ ಎದುರು ಪ್ರತಿಭಟನಾಕಾರರು ಆಗಮಿಸುವ ವೇಳೆ ಸೌಜನ್ಯಳ ತಾಯಿ ಕುಸುಮಾವತಿ ಅವರೂ ಅಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿ ನೂಕು ನುಗ್ಗಲು ಸಂಭವಿಸಿದೆ. ಕುಸುಮಾವತಿ ಅವರನ್ನು ವೇದಿಕೆ ಬಳಿ ಹೋಗಲು ಪ್ರತಿಭಟನಾ ಕಾರರು ಅವಕಾಶ ನೀಡಲಿಲ್ಲ ಹಾಗೂ ಕುಸುಮಾವತಿ ಅವರನ್ನು ಹಾಗೂ ಅವರೊಂದಿಗೆ ಬಂದ ಮಕ್ಕಳನ್ನು ಹಾಗೂ ಇತರರನ್ನು ಪ್ರತಿಭಟನಾಕಾರರು ತಳ್ಳಾಡಿದ್ದಾರೆ. ಅವರು ಇಲ್ಲಿಗೆ ಯಾಕೆ ಬಂದರು ಎಂದು ಪ್ರತಿಭಟನಾಕಾರರ ಗುಂಪು ಆಕ್ರೋಶ ವ್ಯಕ್ತಪಡಿಸಿ ಕೂಗಾಟ ನಡೆಸಿದರು. ಕುಸುಮಾವತಿ ಅವರು ವೇದಿಕೆ ಹತ್ತಲು ಹೋದಾಗ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ಅಲ್ಲಿಯೇ ತಡೆದರು. ಈ ವೇಳೆ ಪೊಲೀಸರ ಮುಂದೆಯೇ ಧರ್ಮಸ್ಥಳ ಸಂಸ್ಥೆಗೆ ಸೇರಿದ ವ್ಯಕ್ತಿಯೊಬ್ಬ ಜಯರಾಮ್ ಕೊರಳು ಪಟ್ಟಿ ಹಿಡಿದು ಆವಾಜ್ ಹಾಕಿದ್ದಾನೆ. ಇದರ ವಿಡಿಯೋ ವೈರಲ್ ಆಗಿದ್ದು ಕುಟುಂಬದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ಹೊತ್ತು ಇಲ್ಲಿ ಗೊಂದಲದ ವಾತಾವರ ಮುಂದುವರಿಯಿತು. ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಸೌಜನ್ಯಾ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ಭಕ್ತರ ಪ್ರತಿಭಟನೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದು ಮಾನಕ್ಕೆ ಕುಂದುಂಟು ಮಾಡಿದ್ದಾಗಿ ಮತ್ತು ಮಗ ಜಯರಾಮನಿಗೂ ಹಲ್ಲೆ ಮಾಡಿದ ಬಗ್ಗೆ ದೂರು ನೀಡಲಾಗಿದೆ. ಇದರಂತೆ, ಐಪಿಸಿ 1860ರ ಕಾಯ್ದೆ ಮತ್ತು 341, 354, 323, 34 ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post