ಮಂಗಳೂರು, ಆಗಸ್ಟ್ 4: ಸುರತ್ಕಲ್ ಬಳಿಯ ಹೊಸಬೆಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಎಟಿಎಂ ಮೆಷಿನನ್ನು ಜೆಸಿಬಿ ಬಳಸಿ ಒಡೆದು ನಗದು ದೋಚಲು ಯತ್ನಿಸಿದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ.
ಇಲ್ಲಿನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಸೌತ್ ಇಂಡಿಯನ್ ಬ್ಯಾಂಕಿನ ಎಟಿಎಂ ಮೆಷಿನನ್ನು ನಸುಕಿನ 2.15ರ ವೇಳೆಗೆ ಜೆಸಿಬಿ ಬಳಸಿ ಒಡೆದು ಹಾಕಲಾಗಿದೆ. ಹೊರಗಿನ ಗ್ಲಾಸ್ ಒಡೆದು ಒಳಗಿನ ಮೆಷಿನನ್ನು ಎಬ್ಬಿಸಲು ಯತ್ನಿಸಿದ್ದು ಈ ವೇಳೆ ಮೆಷಿನ್ ನೆಲಕ್ಕೆ ಅಡ್ಡ ಬಿದ್ದಿದೆ. ಇದೇ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್ ಗೆ ಸಂದೇಶ ಹೋಗಿದ್ದು ಅಲ್ಲದೆ ಸ್ಥಳದಲ್ಲಿ ಸೈರನ್ ಆಗತೊಡಗಿತ್ತು. ಕೆಲಹೊತ್ತು ಭಾರದ ಮೆಷಿನನ್ನು ಎತ್ತಲು ಯತ್ನಿಸಿದ ಕಳ್ಳರು ಬಳಿಕ ಜನ ಸೇರುತ್ತಾರೆಂದು ಭಯದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೆಲಹೊತ್ತಿನಲ್ಲಿ ಬ್ಯಾಂಕ್ ಮ್ಯಾನೇಜರ್ ಸ್ಥಳಕ್ಕೆ ಬಂದಿದ್ದರೆ, ಅದೇ ಹೊತ್ತಿಗೆ ಸುರತ್ಕಲ್ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಜೆಸಿಬಿ ಜೊತೆಗೆ ಕಳ್ಳರು ನಾಪತ್ತೆಯಾಗಿದ್ದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕಳ್ಳರ ಚಲನವಲನ ಎಟಿಎಂ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು. ಇದನ್ನು ಆಧರಿಸಿ ಪೊಲೀಸರು ಜೆಸಿಬಿಯನ್ನು ಜೋಕಟ್ಟೆಯಲ್ಲಿ ಪತ್ತೆ ಮಾಡಿದ್ದಾರೆ. ಪರಿಶೀಲನೆ ವೇಳೆ ಜೆಸಿಬಿ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದು ಮತ್ತು ಅದರ ಬಗ್ಗೆ ಒಂದು ದಿನದ ಹಿಂದೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಇಬ್ಬರು ಆರೋಪಿಗಳಿಗಾಗಿ ಸುರತ್ಕಲ್ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post