ಉಡುಪಿ, ಸೆ.4 : ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಿಂದ ಕಾನೂನುಬಾಹಿರವಾಗಿ ನವಜಾತ ಶಿಶುವನ್ನು ಮಾರಾಟ ಮಾಡಿರುವ ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಿದ್ದಾರೆ. ಕೃತ್ಯದಲ್ಲಿ ಶಾಮೀಲಾಗಿರುವ ವೈದ್ಯ, ಮಧ್ಯವರ್ತಿ ಮಹಿಳೆ ಮತ್ತು ಅತ್ಯಾಚಾರ ಮಾಡಿ ಮಗುವಿನ ಜನನಕ್ಕೆ ಕಾರಣವಾಗಿದ್ದ ವ್ಯಕ್ತಿಯ ಸಹಿತ ಮೂವರನ್ನು ಬಂಧಿಸಲಾಗಿದ್ದು, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಸಿ.ರೋಡ್ ನಲ್ಲಿ ಕ್ಲಿನಿಕ್ ಹೊಂದಿರುವ ವೈದ್ಯ ಡಾ.ಸೋಮೇಶ್ ಸೊಲೊಮನ್, ಮಧ್ಯವರ್ತಿ ವಿಜಯಲಕ್ಷ್ಮೀ ಹಾಗೂ ನವನೀಶ್ ನಾರಾಯಣ ಬಂಧಿತ ಆರೋಪಿಗಳು.
ಶಿರ್ವ ಠಾಣೆ ವ್ಯಾಪ್ತಿಯ 92ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಪ್ರಭಾವತಿ ಮತ್ತು ರಮೇಶ್ ಮೂಲ್ಯ ದಂಪತಿ ತಮಗೆ ಮಕ್ಕಳಾಗದ ಕಾರಣ ಮಧ್ಯವರ್ತಿ ಮೂಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಜನಿಸಿದ್ದ 4 ದಿನದ ಶಿಶುವನ್ನು 4.50 ಲಕ್ಷ ರೂ. ನೀಡಿ ಖರೀದಿಸಿದ್ದರು ಎನ್ನಲಾಗಿದೆ. ದಂಪತಿ ಆ ಮಗುವನ್ನು ಪೋಷನ್ ಟ್ರ್ಯಾಕರ್‌ನಲ್ಲಿ ರಿಜಿಸ್ಟರ್ ಮಾಡಲು ತಮ್ಮೂರಿನ ಅಂಗನವಾಡಿಗೆ ತೆರಳಿದ್ದು, ಆ ಸಂದರ್ಭ ದಂಪತಿಗೆ ಮಗು ಇಲ್ಲದಿರುವುದು ಗೊತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಈ ಬಗ್ಗೆ ವಿಚಾರಿಸಿದಾಗ ಮಂಗಳೂರಿನ ಆಸ್ಪತ್ರೆಯల్లి ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು ಅವರಿಗೆ ಹಣ ನೀಡಿ ಆಸ್ಪತ್ರೆಯ ಮುಖಾಂತರ ಇದೆ ಮಗುವನ್ನು ಪಡೆದಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಶಿರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ದಂಪತಿಯ ಮನೆಗೆ ತೆರಳಿ ವಿಚಾರಿಸಿದಾಗ ಪ್ರಭಾವತಿ ನಿಜ ವಿಷಯ ತಿಳಿಸಿದ್ದಾರೆ. ತನ್ನ ಚಿಕ್ಕಮ್ಮನ ಮಗಳು ಅವಿವಾಹಿತ ಮಹಿಳೆ ಮಗುವಿಗೆ ಜನ್ಮ ನೀಡಿರುವ ವಿಷಯ ತಿಳಿದು ವಿಜಯಲಕ್ಷ್ಮೀ ಎಂಬವರ ಮಾತುಕತೆ ಮಾಡಿ ಹಣ ನೀಡಿ ಮಗುವನ್ನು ಪಡೆದಿರುವುದಾಗಿ ತಿಳಿಸಿದ್ದರು.
ಮಗು ಮಾರಾಟ ಜಾಲದ ಬೆನ್ನತ್ತಿದ ಪೊಲೀಸರು, ವೈದ್ಯ ಡಾ.ಸೋಮೇಶ್ ಸೋಲೊಮನ್, ವಿಜಯಲಕ್ಷ್ಮೀ ಹಾಗೂ ನವನೀತ್ ನಾರಾಯಣ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆ ವಿಜಯಲಕ್ಷ್ಮೀ ಮಂಗಳೂರಿನ ಆಸ್ಪತ್ರೆಯ ಬಳಿ ಪೇಯಿಂಗ್ ಗೆಸ್ಟ್ ಹೊಂದಿದ್ದು, ಆಸ್ಪತ್ರೆಯಲ್ಲಿ ಕ್ಯಾಂಟೀನ್ ಕೂಡ ನಡೆಸುತ್ತಿದ್ದಾರೆ. ಅವರ ಬಳಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬಳ 22 ವರ್ಷದ ಮಾನಸಿಕ ಸಮಸ್ಯೆಯಿದ್ದ ಮಗಳು ಅತ್ಯಾಚಾರ ಸಂತ್ರಸ್ತೆಯಾಗಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಅವಳನ್ನೂ ಅಲ್ಲಿಗೆ ಕರೆತಂದಿದ್ದರು. ನಾಲ್ಕು ತಿಂಗಳ ಬಳಿಕದ ಗರ್ಭಿಣಿಯ ಸ್ಕ್ಯಾನಿಂಗ್ ಸಹಿತ ಇತರ ಪರೀಕ್ಷೆಯನ್ನು ಶಿರ್ವದ ಪ್ರಭಾವತಿಯ ಹೆಸರಿನಲ್ಲೇ ನಡೆಸಿ, ಆಕೆಯ ಆಧಾರ್ ಕಾರ್ಡ್ ನೀಡಿ ಆಕೆಯದ್ದೇ ಮಗುವೆಂದು ಬಿಂಬಿಸಲಾಗಿತ್ತು.
ಮಗುವಿನ ಜನನದ ನಾಲ್ಕು ದಿನದ ಬಳಿಕ ದಂಪತಿ ಮಗುವನ್ನು ಶಿರ್ವಕ್ಕೆ ಕರೆತಂದಿದ್ದು, ಅಂಗನವಾಡಿಗೆ ದಾಖಲಾತಿಗೆ ಹೋಗಿದ್ದರಿಂದ ವಿಷಯ ಬಹಿರಂಗವಾಗಿತ್ತು. ಆರೋಪಿ ನವನೀತ್ ನಾರಾಯಣ ಮಾನಸಿಕ ವೈಕಲ್ಯದ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post