ಕಾರವಾರ: ಉತ್ತರ ಕನ್ನಡದ ಹೊನ್ನಾವರದಲ್ಲಿ 2017ರಲ್ಲಿ ಯುವಕ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ ಅಧಿಕಾರಿಗಳು, ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದು ಕೊಲೆಯಲ್ಲ, ಆಕಸ್ಮಿಕ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಕೋಮು ಬಣ್ಣ ಬಳಿದಿದ್ದ ಬಿಜೆಪಿ ನಾಯಕರು ಹಾಗೂ ಸಂಘಪರಿವಾರ ಕಾರ್ಯಕರ್ತರು ಕೋಮು ದ್ವೇಷದಿಂದಲೇ ಹತ್ಯೆ ಮಾಡಿರುವುದಾಗಿ ವ್ಯಾಪಕವಾಗಿ ಆರೋಪಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಬಳಿಕ ಈ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನೂ ಬಂಧಿಸಲಾಗಿತ್ತು. ಇದೀಗ ಈ ಬಗ್ಗೆ ನಾಲ್ಕು ವರ್ಷಕ್ಕೂ ಅಧಿಕ ಕಾಲ ತನಿಖೆ ನಡೆಸಿದ ಸಿ.ಬಿ.ಐ ಅಧಿಕಾರಿಗಳು, ಸುಮಾರು 1,500 ಪುಟಗಳ ವರದಿಯನ್ನು ಹೊನ್ನಾವರದ ನ್ಯಾಯಾಲಯಕ್ಕೆ ಭಾನುವಾರ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯವು ಸೋಮವಾರ ಸ್ವೀಕೃತಗೊಳಿಸಿದೆ. ಮುಂದಿನ ವಿಚಾರಣೆಯನ್ನು ನ.16ಕ್ಕೆ ಮುಂದೂಡಿದೆ.
2017ರ ಡಿ.7ರಂದು ಮೀನುಗಾರ ಸಮುದಾಯದ ಯುವಕ ಪರೇಶ ಮೃತದೇಹ ಪತ್ತೆಯಾಗಿತ್ತು. ಬಳಿಕ ಜಿಲ್ಲೆಯ ವಿವಿಧೆಡೆಗಳಲ್ಲಿ ಭಾರಿ ಘರ್ಷಣೆಗಳು ಉಂಟಾಗಿದ್ದವು. ಪ್ರಕರಣದ ತನಿಖೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಿ.ಬಿ.ಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post