ಮಂಗಳೂರು, ನ.4 : ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಸಿಎಲ್ -7 ಲೈಸನ್ಸ್ ಗಳನ್ನು ಹಣಕ್ಕಾಗಿ ಬೇಕಾಬಿಟ್ಟಿ ನೀಡುತ್ತಿದ್ದಾರೆ. ಇದರಲ್ಲಿ ಅಬಕಾರಿ ಸಚಿವರು ಮತ್ತು ಆಯಾ ಜಿಲ್ಲೆಗಳ ಅಬಕಾರಿ ಡೀಸಿಗಳು ಭಾಗಿಯಾಗಿದ್ದಾರೆ ಎಂದು ವೈನ್ ಶಾಪ್ ಮಾಲೀಕ, ತುಳು ಸಿನಿಮಾ ನಿರ್ಮಾಪಕ ಆರ್.ಧನರಾಜ್ ಆರೋಪ ಮಾಡಿದ್ದಾರೆ.
ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿ ಕರೆದು ಆರೋಪ ಮಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬೇಕಾಬಿಟ್ಟಿ ರೀತಿ ಸಿಎಲ್ -7 ಲೈಸನ್ಸ್ ಗಳನ್ನು ಹಂಚಿದ್ದಾರೆ. ಇದಕ್ಕಾಗಿ ಅಬಕಾರಿ ಡೀಸಿಗಳು 20 ಲಕ್ಷ, ಸಚಿವರು 10 ಲಕ್ಷ ಲಂಚ ಪಡೆಯುತ್ತಿದ್ದಾರೆ. ಇದಲ್ಲದೆ, ಸರ್ಕಾರಕ್ಕೆ 9-10 ಲಕ್ಷ ತೆರಿಗೆ ಕಟ್ಟಬೇಕಾಗುತ್ತದೆ. ಲೈಸನ್ಸ್ ಹೆಸರಲ್ಲಿ ಯಾಕೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ನೇರವಾಗಿ ಕೊಡಬಹುದಲ್ವಾ ಎಂದರು.
ಮಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಬಿಂದುಶ್ರೀ ಎನ್ನುವ ಅಬಕಾರಿ ಡೀಸಿ ಇದ್ದರು. ಆನಂತರ ಉಡುಪಿಗೆ ಹೋಗಿದ್ದರು, ಇದೀಗ ಮತ್ತೆ ಮಂಗಳೂರಿಗೆ ಬಂದಿದ್ದಾರೆ. ಮಂಗಳೂರಿನಲ್ಲಿ ಡೀಸಿಯಾಗಿದ್ದ ಶ್ರೀನಿವಾಸ್ ಉಡುಪಿಗೆ ಹೋಗಿದ್ದಾರೆ. ಇವರೆಲ್ಲ ಪರಮ ಭ್ರಷ್ಟರಾಗಿದ್ದವರು. ಇವರನ್ನೇ ಮತ್ತೆ ಯಾಕೆ ಇಲ್ಲಿಗೆ ಹಾಕಿದ್ದಾರೆ ಎಂದು ಧನರಾಜ್ ಪ್ರಶ್ನೆ ಮಾಡಿದ್ದಾರೆ. ಇವರ ವಿರುದ್ಧ ಲೋಕಾಯುಕ್ತಕ್ಕೂ ದೂರು ಕೊಟ್ಟಿದ್ದೇನೆ. ಅಬಕಾರಿ ಸಚಿವರೂ ಪರಮ ಭ್ರಷ್ಟ. ಇವರನ್ನೆಲ್ಲ ಯಾಕೆ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಪಿಡಬ್ಲ್ಯುಡಿ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಸೋಮನಾಥ ಎಂಬ ಅಧಿಕಾರಿ ಒಂಬತ್ತು ವರ್ಷಗಳಿಂದ ಒಂದೇ ಕಡೆ ಇದ್ದಾರೆ. ತನಗೆ ಬೆಳಗಾವಿ ಸಾಹುಕಾರ್ ಬಾರೀ ದೋಸ್ತ್. ಮೂರು ಸಿಎಂ ಚೇಂಜ್ ಆದರೂ ನಾನು ಚೇಂಜ್ ಆಗಲ್ಲ ಎಂದು ಹೇಳುತ್ತ ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನೂ ದುರುಪಯೋಗ ಮಾಡುತ್ತಿದ್ದಾರೆ. ಯಾಕೆ ಸರ್ಕಾರ ಇವರನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಂಡಿದೆ ಎಂದು ಪ್ರಶ್ನಿಸಿದರು.
ರಾಜ್ಯದ ರಾಜ್ಯೋತ್ಸವ ಪ್ರಶಸ್ತಿಗೆ ತುಳು ಸಿನಿಮಾ ಇಂಡಸ್ಟ್ರಿಯ ನಿರ್ಮಾಪಕ, ನಿರ್ದೇಶಕರನ್ನೂ ಪರಿಗಣಿಸಬೇಕು. ತುಳು ಸಿನಿಮಾ ಕೂಡ ಕನ್ನಡದ್ದೇ ಒಂದು ಭಾಗ. ತುಳು ಸಿನಿಮಾಗಳ ಬಗ್ಗೆಯೂ ಪ್ರೋತ್ಸಾಹ ನೀಡಬೇಕು ಎಂದು ಧನರಾಜ್ ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post