ಮೂಡುಬಿದಿರೆ: ಬಡಗಮಿಜಾರುನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕೆಂಪು ಕಲ್ಲಿನ ಕೋರೆಗೆ ಉಪ ಲೋಕಾಯುಕ್ತ ವೀರಪ್ಪ ಗೌಡ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೆಸಿಬಿ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲು ಲೋಕಾಯುಕ್ತ ಅಧಿಕಾರಿಗಳು ಮೂಡುಬಿದಿರೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಅಂದ್ರೆ, ದಾಳಿ ಸಂದರ್ಭದಲ್ಲಿ ಗಣಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಕೃಷ್ಣವೇಣಿ ಅವರೂ ಇದ್ದರು. ಇತ್ತೀಚೆಗಷ್ಟೇ ಮಂಗಳೂರು, ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆಂದು ಲೋಕಾಯುಕ್ತ ಅಧಿಕಾರಿಗಳೇ ಈಕೆಯ ಮನೆ, ಕಚೇರಿಗಳಿಗೆ ದಾಳಿ ನಡೆಸಿದ್ದರು. ಬೆಂಗಳೂರಿನಲ್ಲಿ ಎರಡು ಮನೆ ಸೇರಿದಂತೆ 11 ಕೋಟಿಗೂ ಹೆಚ್ಚು ಆಸ್ತಿ ಇರುವ ಬಗ್ಗೆ ಕೇಸು ದಾಖಲು ಮಾಡಿತ್ತು. ಮೇಲ್ನೋಟಕ್ಕೆ ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಕ್ಕೀಡಾದ ಅಧಿಕಾರಿಯೇ ಇಲ್ಲಿ ಗಣಿ ಇಲಾಖೆಯ ಅಧಿಕಾರಿಯಾಗಿ ಉಪ ಲೋಕಾಯುಕ್ತರ ದಾಳಿಯ ವೇಳೆ ಉಪಸ್ಥಿತಿ ಇದ್ದರು.
ಉಪ ಲೋಕಾಯುಕ್ತರು ಅಕ್ರಮ ಕೋರೆಯ ಬಗ್ಗೆ ಪ್ರಶ್ನೆ ಮಾಡಿದಾಗ, ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಇಲ್ಲಿಂದ ಮಣ್ಣನ್ನು ಎತ್ತಿ ಆಂಧ್ರಕ್ಕೆ ಒಯ್ಯುತ್ತಿದ್ದಾರೆ, ಆಂಧ್ರದಲ್ಲಿ ಸಿಮೆಂಟ್ ಮಿಕ್ಸಿಂಗ್ ಮಾಡಲು ಈ ಮಣ್ಣನ್ನು ಬಳಸುತ್ತಿದ್ದಾರೆ. ಅಲ್ಲಿ ಲ್ಯಾಟರೈಟ್ ಸಿಗ್ತಾ ಇಲ್ಲವೆಂದು ಇಲ್ಲಿನ ಮಣ್ಣು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ, ಗಣಿ ಇಲಾಖೆಯ ಮಹಿಳಾ ಅಧಿಕಾರಿ ಕೃಷ್ಣವೇಣಿಯನ್ನು ಉಪ ಲೋಕಾಯುಕ್ತರು ಪ್ರಶ್ನೆ ಮಾಡಿದ್ದು, ಏನ್ರೀ ನಿಮ್ಮ ಗಮನಕ್ಕೆ ಬಂದಿರಲಿಲ್ವಾ. ನಿಮ್ಮ ಹೆಡ್ ಯಾರಮ್ಮಾ ಎಂದು ಕೇಳಿದ್ದಾರೆ. ಸ್ಟಾಪ್ ಮಾಡಲು ಏನ್ ಮಾಡಿದ್ದೀರಾ ಎಂದು ಕೇಳಿದಾಗ, ಈಗ ಸ್ಟಾಪ್ ಆಗಿದೆ ಸರ್. ಇನ್ನು ಕೋರ್ಟಿಗೆ ಹಾಕಬೇಕು ಎಂದು ಹೇಳುತ್ತಾರೆ. ವಾಹನ ಬರದಂತೆ ರಸ್ತೆ ಬಂದ್ ಮಾಡಿದ್ದೀರಾ ನೀವು ಎಂದು ಲೋಕಾಯುಕ್ತ ಎಸ್ಪಿ ನಟರಾಜ್ ಪ್ರಶ್ನೆ ಮಾಡಿದ್ದಾರೆ.
ಆಕೆ ಕೇಸ್ ಮಾಡ್ತೀನಿ ಸರ್ ಎಂದು ಹೇಳಿದಾಗ ಗರಂ ಆದ ಜಸ್ಟಿಸ್ ವೀರಪ್ಪ, ಪ್ರತಿ ಬಾರಿಯೂ ಕೇಸ್ ಮಾಡ್ತೀನಿ ಅಂದ ಮಾತ್ರಕ್ಕೆ ಮುಗಿಯೋದಿಲ್ಲ. ಕೇಸ್ ಮಾಡಿ ಏನ್ ಮಾಡಿದ್ದೀರಿ.. ಅವರಿಂದ ಫೈನ್ ರಿಕವರಿ ಮಾಡಿದ್ದೀರಾ.. ಭೂಮಿ ರಕ್ಷಣೆ ಮಾಡೋಕೆ ಏನು ಮಾಡಿದ್ದೀರಾ.. ನೀವು ಮಗು ಅಳ್ತಾ ಇದೆಯಂದು ಹೇಳಿದಂಗಿದೆ. ಮಗು ಅಳದೇ ಇರಲು ಏನು ಮಾಡಿದ್ದೀರಾ ಎಂದರೆ ಕೇಸ್ ಹಾಕಿದೆ ಅಂತೀರಾ.. ನಿಮ್ಮದೆಲ್ಲಾ ಅಡ್ಜಸ್ಟ್ ಮೆಂಟ್ ಆಗಿಹೋಯ್ತಾ.. ಇಷ್ಟೊಂದು ಆಳವಾಗಿ ಹೊಂಡ ತೋಡಿ ಮಾಡಿಟ್ಟಿದ್ದಾರೆ. ಹಿಂಗಾದ್ರೆ ಹೇಗೆ.. ಪರಿಸರಕ್ಕೆ ಎಫೆಕ್ಟ್ ಆಗಲ್ವಾ ಎಂದು ಜೋರು ಮಾಡಿದ್ದಾರೆ. ಸುಮೊಟೋ ಕೇಸು ಹಾಕಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಲೊಕಾಯುಕ್ತ ದಾಳಿಗೂ ಮುನ್ನ ಮಾಹಿತಿ ಲೀಕ್ ! : ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಬಗ್ಗೆ ಅಕ್ರಮ ಗಣಿ ಮಾಲಕರಿಗೆ ಮಾಹಿತಿ ಇತ್ತು ಎಂದು ಗ್ರಾಮಸ್ತರು ದೂರಿದ್ದಾರೆ. ಪ್ರತೀ ದಿನ ಬೆಳಗ್ಗಿನ ಜಾವ 4ಗಂಟೆಯಿಂದ ಅಕ್ರಮ ಗಣಿಗಾರಿಕೆ ಆರಂಭವಾಗುತ್ತಿತ್ತು. ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳು ಸ್ಥಳದಲ್ಲೇ ಇಡಲಾಗುತ್ತಿತ್ತು. ಆದರೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಮಾಹಿತಿ ತಿಳಿದಿದ್ದ ಕಾರಣ ಕೋರೆಯಲ್ಲಿ ಕಲ್ಲು ಕತ್ತರಿಸುವ ಯಂತ್ರೋಪಕರಣಗಳು ಸೇರಿದಂತೆ ಇತರ ಬೆಲೆಬಾಳುವ ಉಪಕರಣಗಳನ್ನು ರಾತ್ರಿಯೇ ಕೋರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post