ಮಂಗಳೂರು: ನಗರದ ಬೋಳೂರು ವಾರ್ಡ್ ನ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಅವರು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ನಗರ ಸ್ಟೇಟ್ ಬ್ಯಾಂಕ್ ಸಮೀಪದ ತಾಜ್ ಹೋಟೆಲ್ ಬಳಿ ಸಂಜೆ 4 ಗಂಟೆ ಸುಮಾರಿಗೆ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತಿತರರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಜಗದೀಶ್ ಶೆಟ್ಟಿ ಹಣಕಾಸು ತೊಂದರೆಗೆ ಒಳಗಾಗಿದ್ದರು ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾರೆಯೇ ಎನ್ನುವುದು ತಿಳಿದುಬಂದಿಲ್ಲ. ಜಗದೀಶ್ ಶೆಟ್ಟಿ ಒಳ್ಳೆಯ ಹಾಡುಗಾರನಾಗಿದ್ದು, ಹಿಂದೆ ಆರ್ಕೆಸ್ಟ್ರಾ ತಂಡದಲ್ಲಿ ಸಿಂಗರ್ ಆಗಿದ್ದರು. ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಕಾರಣಕ್ಕೆ ಫೇಮಸ್ ಆಗಿದ್ದರು. ಹಿಂದಿ ಸಿನಿಮಾದ ದಂತಕತೆ ಮುಕೇಶ್ ಅವರಂತೆ ಹಾಡುತ್ತಿದ್ದ ಕಾರಣಕ್ಕೆ ಮಂಗಳೂರಿನ ಮುಕೇಶ್ ಎಂದೂ ಅವರನ್ನು ಕರೆಯುತ್ತಿದ್ದರು. ಮೊದಲ ಬಾರಿಗೆ ಬಿಜೆಪಿಯಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದಲ್ಲದೆ ಜನರ ಸಮಸ್ಯೆಗಳಿಗೆ ದನಿಯಾಗುತ್ತಿದ್ದ ಕಾರಣಕ್ಕೆ ಜನಾನುರಾಗಿ ಎಂಬ ಹೆಸರನ್ನೂ ಗಳಿಸಿದ್ದರು, ವಿಶೇಷ ಮಕ್ಕಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಿದ್ದ ಅವರು ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದರ ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸುತ್ತಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post