ಬೆಂಗಳೂರು: ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.
ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯ ಕುಂದಾಪುರ ಸರ್ಕಾರಿ ಕಾಲೇಜಿನ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದರು. ಸಮವಸ್ತ್ರ ಸಂಹಿತೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಇಲಾಖೆ ಮತ್ತು ಪಿಯು ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಈ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದೆ. ಅಡ್ವೊಕೇಟ್ ಜನರಲ್ ಅವರೊಂದಿಗೆ ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಬೇಕಿದೆ. ಸರ್ಕಾರದ ನಿಲುವನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಅಡ್ವೊಕೇಟ್ ಜನರಲ್ಗೆ ಸೂಚಿಸಿದ್ದಾರೆ. ಹೈಕೋರ್ಟ್ ತೀರ್ಪು ಬರುವವರೆಗೆ ಸಮವಸ್ತ್ರ ಸಂಹಿತೆ ಪಾಲಿಸಬೇಕು ಎನ್ನುವುದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮತೀಯ ರಾಜಕಾರಣಕ್ಕೆ ವಿದ್ಯಾರ್ಥಿಗಳ ಬಳಕೆ :
ಇದು ನಿಜವಾಗಿ ವಿದ್ಯಾರ್ಥಿಗಳ ನಡುವೆ ಚರ್ಚೆ, ವಿವಾದ ಹುಟ್ಟಿಸುವ ವಿಚಾರವೇ ಅಲ್ಲ. ಶಾಲಾ ಕಾಲೇಜುಗಳಲ್ಲಿ ಕೂಡಾ ವಿದ್ಯಾರ್ಥಿಗಳನ್ನು ಧರ್ಮದ ವಿಚಾರದಲ್ಲಿ ವಿಭಜನೆ ಮಾಡುವ ಅಜೆಂಡಾವನ್ನು ಈ ಮತೀಯವಾದಿ ಸಂಘಟನೆಗಳು ಇಟ್ಟುಕೊಂಡು, ಈ ಅನಗತ್ಯ ವಿಚಾರಗಳನ್ನು ಸುದ್ದಿಯಾಗುವಂತೆ ಮಾಡುತ್ತಿದೆ. ಈಗಿನ ದುಬಾರಿ ಶುಲ್ಕ, ಅವೈಜ್ಞಾನಿಕ ಪಠ್ಯಕ್ರಮ, ಎನ್‌ಇಪಿಯಂತಹ ಅವೈಜ್ಞಾನಿಕ ಕಾಯ್ದೆ ಮೊದಲಾದ ಬಗ್ಗೆ ವಿರೋಧ ಮಾಡುವಂತಹ ಧ್ವನಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಗಮನ ಬೇರೆಡೆಗೆ ಸೆಳೆಯುವ ತಂತ್ರ ಇದಾಗಿದೆ. ಈ ವಿವಾದಗಳಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವುದು ಖಂಡಿತ. ಉಡುಪಿ, ಕುಂದಾಪುರದ ಕಾಲೇಜುಗಳಲ್ಲಿ ನಡೆದ ಘಟನೆ ನೋಡಿದರೆ, ಇದರಲ್ಲಿ ಎರಡು ಸಂಘಟನೆಗಳು ಮತೀಯ ರಾಜಕೀಯಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ,” ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಮುಖಂಡರು ಮಾಧುರಿ ಬೋಳಾರ್ ತಿಳಿಸಿದ್ದಾರೆ.
ಶಾಸಕ ರಘುಪತಿ ಭಟ್ ವಿರುದ್ಧ ಆರೋಪ ಸರಿಯಲ್ಲ :
ಇದೇ ವೇಳೆ ಉಡುಪಿ ಶಾಸಕ ರಘುಪತಿ ಭಟ್ ಅವರ ವಿರುದ್ಧ ವಿನಾಕಾರಣ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅವರು ಶಿಕ್ಷಣ ವಂಚಿತ ಮಕ್ಕಳಿಗೆ ಸಮಸ್ಯೆಯಾಗದಂತೆ ಹಲವು ಕ್ರಮ ತೆಗೆದುಕೊಂಡಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷರಾಗಿ ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಸ್ಕಾರ್ಫ್ ವಿಚಾರದಲ್ಲಿ ಬಾಂಬೆ, ಕೇರಳ ಹೈಕೋರ್ಟ್ಗಳು ಈಗಾಗಲೇ ತೀರ್ಪು ನೀಡಿವೆ. ಶಾಲೆಗಳಿಗೆ ಸ್ಕಾರ್ಪ್ ಧರಿಸಿ ಬರಬಾರದು ಎಂದೇ ಹೇಳಿವೆ. ಶಾಲಾ ಕಾಲೇಜು ಸೋದರತ್ವ ಬೆಳೆಸಲು ಪೂರಕವಾಗಬೇಕು. ಮಕ್ಕಳು ಶಾಲೆಗೆ ಸೇರುವಾಗ ವಸ್ತ್ರಸಂಹಿತೆಯನ್ನು ಒಪ್ಪಿ ಸಹಿ ಹಾಕಿರುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಸಮವಸ್ತ್ರ ಧರಿಸಿ ಬಂದಿದ್ದಾರೆ. ಇದೀಗ ಕೆಲವರಿಂದ ಸಮಸ್ಯೆಯಾಗಿದೆ. ಸಮಸ್ಯೆ ಬಗೆಹರಿಸಲು ಶಾಸಕರು ಮತ್ತು ಮುಖಂಡರ ಜೊತೆ ಚರ್ಚೆ ನಡೆಸುತ್ತೇವೆ. ವಸ್ತ್ರಸಂಹಿತೆ ಪಾಲಿಸುವಂತೆ ಮತ್ತೆ ಸುತ್ತೋಲೆ ಹೊರಡಿಸುತ್ತೇವೆ ಎಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಶಿಕ್ಷಣ ಸಚಿವ ನಾಗೇಶ್ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post