ಮಂಗಳೂರು: ಶಾಂತಿ ಪ್ರಕಾಶನ ಪ್ರಕಟಿಸಿದ, ಪತ್ರಕರ್ತ ಎ.ಕೆ. ಕುಕ್ಕಿಲ ಬರೆದ ‘ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ 6 ಪ್ರಶ್ನೆಗಳು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ‘ತಂತ್ರಜ್ಞಾನ ಯುಗದಲ್ಲಿ ಓದುಗರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಒಳ್ಳೆಯ ಕೃತಿಗಳಿಗೆ ಸದಾ ಓದುಗರಿದ್ದಾರೆ. ಆರೋಗ್ಯಪೂರ್ಣ ಸಮಾಜಕ್ಕೆ ಉತ್ತಮ ಸಾಹಿತ್ಯ ಕೃತಿಗಳ ಅಗತ್ಯವಿದೆ. ಎ.ಕೆ. ಕುಕ್ಕಿಲ ಅವರ ಈ ಕೃತಿ ಸಮಾಜಕ್ಕೆ ಕೊಡುಗೆಯಾಗಲಿ’ ಎಂದು ಆಶಿಸಿದರು.
ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ಅರವಿಂದ ಚೊಕ್ಕಾಡಿ ‘ ಮುಸ್ಲಿಂ ಮುಸ್ಲಿಂ ಆಗಿಯೇ ಮಾತಾಡಬೇಕು, ಹಿಂದು ಹಿಂದುವಾಗಿಯೇ ಮಾತಾಡಬೇಕು. ಹಿಂದೂ ಮುಸ್ಲಿಮರು ಜೊತೆಯಾಗಿ ಬಾಳಿದ ಸಾವಿರ ವರ್ಷಗಳ ಇತಿಹಾಸ ಈ ಮಣ್ಣಿನಲ್ಲಿದೆ. ಸಂಘರ್ಷ ಜಗಳ ಇರಲಿಲ್ಲ ಎಂದಲ್ಲ. ಆದರೆ ಅದೊಂದು ಸ್ಥಿರ ಘಟನೆ ಆಗಿರಲಿಲ್ಲ. ಸೌಹಾರ್ದದ ಈ ಸಾವಿರ ವರ್ಷಗಳ ಪರಂಪರೆಯನ್ನು ನಾವು ಸ್ಮರಿಸಿಕೊಂಡು ಹರಡಬೇಕಾಗಿದೆ ಎಂದರು.
ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರೊ. ಡಾ. ಅಬ್ದುಲ್ ಮಜೀದ್ ಮಾತಾಡಿ, ಇವತ್ತು ಜ್ಞಾನಕ್ಕೆ ಕೊರತೆ ಇಲ್ಲ ಆದರೆ ಎಂಥ ಮಾತನ್ನು ನಂಬುವ ಪರಿಸ್ಥಿತಿ ಇದೆ ಇವತ್ತು ಲೇಖನಿಗಳು ವಿಷವನ್ನು ಕಾರುತ್ತಿವೆ ಆ ವಿಷದ ಪ್ರಭಾವ ಸಾಮಾಜಿಕವಾಗಿ ದಟ್ಟವಾಗುತ್ತಿದೆ ಇಂಥ ವಿಷದ ಲೇಖನಿ ಗಳಿಗೆ ಕಡಿವಾಣ ಇರಬೇಕಾಗಿದೆ ಅದಕ್ಕೆ ಇಂತಹ ಪುಸ್ತಕಗಳು ಬಹಳ ದೊಡ್ಡ ಆಯುಧ ಎಂದವರು ಸಮಾರೋಪ ನುಡಿಯಲ್ಲಿ ಹೇಳಿದರು.
ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಮುಹಮ್ಮದ್ ಇನಾಮುಲ್ ಅಫ್‌ವಾನ್ ಕಿರಾಅತ್ ಪಠಿಸಿದರು. ಶಾಂತಿ ಪ್ರಕಾಶನದ ಕಾರ್ಯದರ್ಶಿ ಅಬ್ದುಸ್ಸಲಾಂ ಉಪ್ಪಿನಂಗಡಿ ವಂದಿಸಿದರು. ಕಾಸಿಂ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post