ಮಂಗಳೂರು, ಮೇ 4 : ಕ್ರಿಕೆಟ್ ಆಡುತ್ತಿದ್ದಾಗ ಹಾಸ್ಟೆಲ್ ಕಟ್ಟಡದ ಮೇಲಕ್ಕೆ ಹಾರಿದ ಚೆಂಡನ್ನು ಹೆಕ್ಕಲು ಹೋದ ಪಿಯುಸಿ ವಿದ್ಯಾರ್ಥಿಯೊಬ್ಬ ನಾಲ್ಕನೇ ಮಹಡಿಯಿಂದ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಕಾವೂರಿನಲ್ಲಿ ನಡೆದಿದೆ. ಬಿಜಾಪುರ ಮೂಲದ ಪ್ರಣವ್ ಎಸ್. ಮುಂಡಾಸ (18) ಮೃತ ಹುಡುಗ. ಮೂಲತಃ ಬಿಜಾಪುರದ ಸತೀಶ್ ಎಂಬವರ ಪುತ್ರನಾಗಿರುವ ಈತ ನಗರದ ಕೊಟ್ಟಾರ ಚೌಕಿಯ ಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.
ಸಂಜೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹಾಸ್ಟೆಲ್ ಕಟ್ಟಡದ ಮೇಲಕ್ಕೆ ಹಾರಿತ್ತು. ಬಳಿಕ ನೋಡಿದಾಗ ನಾಲ್ಕು ಮಹಡಿಯ ಕಟ್ಟಡದ ಮೇಲಿನ ರೂಫಿಂಗ್ ಶೀಟ್ ಎಡೆಯಲ್ಲಿ ಚೆಂಡು ಸಿಕ್ಕಿಕೊಂಡಿತ್ತು. ಚೆಂಡನ್ನು ತೆಗೆಯಲು ಹುಡುಗ ಪ್ರಣವ್ ಮೇಲಕ್ಕೆ ಹತ್ತಿದ್ದು ರೂಫಿಂಗ್ ಶೀಟ್ ಮೇಲಿನಿಂದ ನಡೆದು ಹೋಗಿದ್ದಾನೆ. ಈ ವೇಳೆ, ರೂಫಿಂಗ್ ಶೀಟ್ ನಡುವೆ ಬೆಳಕು ಬೀರುವುದಕ್ಕಾಗಿ ಹಾಕಿದ್ದ ಪ್ಲಾಸ್ಟಿಕ್ ತಗಡು ಕಟ್ ಆಗಿ ಹುಡುಗ ನೇರವಾಗಿ ನೆಲಕ್ಕೆ ಬಿದ್ದಿದ್ದಾನೆ. ಹಾಸ್ಟೆಲ್ ನಲ್ಲಿ ಘಟನೆ ನಡೆದಿರುವುದರಿಂದ ವಾರ್ಡನ್ ನಿರ್ಲಕ್ಷ್ಯದ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.