ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಯುವ ಸೇವಾ ವಿಭಾಗ ಅಯುಧ್ ಮಂಗಳೂರು ಇವರಿಂದ ನಗರದ ಬೊಕ್ಕಪಟ್ನದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರದಿನವನ್ನು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಆಯುಷ್ ಇಲಾಖೆಯ ನಿವೃತ್ತ ಅಧಿಕಾರಿ ಡಾ.ದೇವದಾಸ್ ಪುತ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಠದ ಯುವ ಸೇವಾ ವಿಭಾಗವಾದ “ಅಯುಧ್” ಮೂಲಕ ವಿಶ್ವದಾದ್ಯಂತ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸ್ಪೂರ್ತಿ ನೀಡುತ್ತಿದ್ದಾರೆ.ಅಮ್ಮನವರ ಅನುಗ್ರಹದೊಂದಿಗೆ ಅಯುಧ್ ಮಂಗಳೂರು ತಂಡವು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ಅಮಲ ಭಾರತ ಸ್ವಚ್ಛತಾ ಜನಜಾಗರಣ ಅಭಿಯಾನ, ಗಿಡಗಳನ್ನು ಬೆಳೆಸುವುದು, ಬೀಜದ ಉಂಡೆಗಳನ್ನು ಮಾಡಿ ಉಪಯುಕ್ತ ಫಲಗಳ ಮರಗಳು ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದರು. ಮಕ್ಕಳಿಗೆ ಬಾಲ್ಯದಲ್ಲೇ ಔಷಧೋಪಯೋಗಿ ಸಸ್ಯಗಳ ಪರಿಚಯವನ್ನು ಮಾಡಿ ಅದರ ಉಪಯೋಗದ ಮಾಹಿತಿ ನೀಡಿದಲ್ಲಿ ಪ್ರಾಥಮಿಕ ಆರೋಗ್ಯ ಸಮಸ್ಯೆ ಹಾಗೂ ಸ್ವಾಸ್ಥ್ಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಅಮೃತ ಜ್ಯೋತಿ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿರುವ ಸಸ್ಯದ ಬೀಜವನ್ನೊಳಗೊಂಡ ಪರಿಸರಸ್ನೇಹಿ ಪೆನ್ಸಿಲ್ ಬಗ್ಗೆ ಮಾಹಿತಿ ನೀಡಿದರು.ಈ ಶಾಲೆಯಲ್ಲಿ ಮುಂದೆ ಅಡುಗೆಗೆ ಉಪಯುಕ್ತವಾಗುವ ತರಕಾರಿ ಗಿಡಗಳನ್ನು ಬೆಳೆಸುವ ಯೋಜನೆ ಇದೆ ಎಂದರು. ಈ ಸಂದರ್ಭದಲ್ಲಿ ಸಸಿಗಳನ್ನು ಹಾಗೂ ಬೀಜಯುಕ್ತ ಪೆನ್ಸಿಲ್ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾಮುಖ್ಯ ಶಿಕ್ಷಕಿ ಡ್ರೆಸಿಲ್ ಲಿಲ್ಲಿ ಮೆನೆಜಸ್,ಅಯುಧ್ ಅಧ್ಯಕ್ಷರಾದ ಅಡ್ವೊಕೇಟ್ ಸ್ವಸ್ತಿ ಶೆಟ್ಟಿ,ಕಾರ್ಯದರ್ಶಿ ಡಾ.ರಿಷಿಕೇಶ್ ಪ್ರೇಮರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ವೀಣಾ ಧಾರಿಣಿ ನಿರೂಪಿಸಿದರು.ಅಯುಧ್ ಸದಸ್ಯರು ಭಾಗವಹಿಸಿದ್ದರು.ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post