ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ವಂಚನೆ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿರುವ ಆರೋಪದಡಿ ಹಣಕಾಸು ಕಂಪನಿಯೊಂದರ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಅವರ ನೇತೃತ್ವದಲ್ಲಿ ಸಹಕಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಭಾಗ್ಯನಗರದ 5ನೇ ಕ್ರಾಸ್ನಲ್ಲಿರುವ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದಾಳಿಯ ವೇಳೆ ಸಂಸ್ಥೆಯ ವೆಬ್ಸೈಟ್ ಶಡೌನ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ, ಪರಿಶೀಲನೆ ಮುಂದುವರಿದಿದೆ.
ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದರ ಸಿಇಒ ಪ್ರತಿ ತಿಂಗಳಿಗೆ ಶೇ.5ರಷ್ಟು ಬಡ್ಡಿ ನೀಡುವುದಾಗಿ ಸಾವಿರಾರು ಜನರಿಗೆ ಆಮಿಷವೊಡ್ಡಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದು. ಈ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿ ಯಾವುದೇ ಅಧಿಕೃತ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ. ಹೂಡಿಕೆ ಸಂಗ್ರಹ ಹೆಚ್ಚಿಸಲು ಹಲವು ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ವೆಬ್ಸೈಟ್ ಮೂಲಕ ಹೂಡಿಕೆಗೆ ಜನರನ್ನು ಆಕರ್ಷಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಠೇವಣಿಗಳನ್ನು ಸಂಗ್ರಹಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಹೂಡಿಕೆದಾರರಿಗೆ ಯಾವುದೇ ಸಮರ್ಪಕ ಭದ್ರತೆ ಒದಗಿಸದೇ, ಸಂಗ್ರಹಿಸಿದ ಹಣವನ್ನು ಬೇರೆ ವ್ಯವಹಾರಗಳಲ್ಲಿ ಬಳಸಲಾಗಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಕರ್ನಾಟಕ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಹಾಗೂ ಬಡ್ಸ್ ಸೆಲ್ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.
ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಕೆಲವು ಠೇವಣಿದಾರರು ಅವಧಿ ಪೂರ್ಣಗೊಂಡ ಬಳಿಕವೂ ಅಸಲು ಹಾಗೂ ಬಡ್ಡಿ ಹಣವನ್ನು ನಿಗದಿತ ದಿನಾಂಕದಂದು ಮರುಪಾವತಿಸಲಾಗಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಂಸ್ಥೆಯ ಹಣಕಾಸು ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಕಂಪನಿಯಲ್ಲಿ ಹಣ ತೊಡಗಿಸಿದರೆ ಕೇವಲ 15 ತಿಂಗಳಲ್ಲಿ ಈ ಹಣ ಡಬಲ್ ಆಗಲಿದೆಯಂತೆ. ಇಲ್ಲಿ ಎರಡು ಆಯ್ಕೆಗಳಿವೆ. ಒಂದು ಹೂಡಿಕೆ ಮಾಡಿ 15 ತಿಂಗಳಿಗೆ ಡಬಲ್ ಹಣ ಪಡೆಯುವುದು, ಇನ್ನೊಂದು ಹೂಡಿಕೆ ಮಾಡಿ ಅದಕ್ಕೆ ಪ್ರತಿ ತಿಂಗಳು ಪ್ರತಿಶತ 5ರಂತೆ ಬಡ್ಡಿ ಹಣ ಪಡೆಯುವುದು. 20ನೇ ತಿಂಗಳಿಗೆ ನೀವು ಹೂಡಿಕೆ ಮಾಡಿದ ಹಣವೂ ನಿಮ್ಮ ಖಾತೆಗೆ ಮರಳಲಿದೆ. ಈ ಯೋಜನೆಯಲ್ಲಿ 20 ತಿಂಗಳಿಗೆ ನಿಮ್ಮ ಹಣ ಡಬಲ್ ಆಗಲಿದೆ.
ಈ ಕಂಪನಿ ಕಳೆದ ಮೂರುವರೆ ವರ್ಷಗಳಿಂದ ಬೆಳಗಾವಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಭಾಗ್ಯನಗರ 5ನೇ ಕ್ರಾಸ್‌ನಲ್ಲಿ ಕಚೇರಿ ಹೊಂದಿದ್ದು, ವರ್ಷದಲ್ಲಿ ಎರಡ್ಮೂರು ಬಾರಿ ಸ್ಟಾರ್ ಹೋಟೆಲ್‌ಗಳಲ್ಲಿ ಹೂಡಿಕೆದಾರ ತರಬೇತಿ ಹೆಸರಿನಲ್ಲಿ ಸಭೆ ನಡೆಸಿ ಹೆಚ್ಚಿನ ಹೂಡಿಕೆ ಮಾಡಿದವರಿಗೆ, ಈಗಿರುವ ಪ್ಲಾನ್ ಮೆಚ್ಯೂರಿಟಿ ಆಗಿ ಮರಳಿ ಆ ಹಣವನ್ನು ಹೂಡಿಕೆ ಮಾಡುವವರಿಗೆ ಆಕರ್ಷಕ ಗಿಫ್ಟ್ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿಯವರೆಗೆ ಡಬಲ್ ಆದ ಹಣವನ್ನು ಅಲ್ಲಿಯೇ ಮರಳಿ ತೊಡಗಿಸಲು ಪ್ರೇರೇಪಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.







Discussion about this post