ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ಅವರು ಮದುವೆ ಆಗಿಲ್ಲ. ಆದರೆ ಮಕ್ಕಳನ್ನು ಪಡೆಯುವ ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ. ಈಗ ಅವರು 6 ತಿಂಗಳ ಗರ್ಭಿಣಿ ಅವಳಿ ಮಕ್ಕಳಿಗೆ ಅವರು ತಾಯಿ ಆಗುತ್ತಿದ್ದಾರೆ. 40 ವರ್ಷ ದಾಟಿದ ಬಳಿಕ ಅವರು ತಾಯಿ ಆಗುತ್ತಿದ್ದಾರೆ. ಐವಿಎಫ್ (IVF) ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗುತ್ತಿದೆ. ಅವರು ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಆಗುತ್ತಿರುವುದರ ಬಗ್ಗೆ ಭಾವನಾ ರಾಮಣ್ಣ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
”ಇದು ನನ್ನ ಹೊಸ ಅಧ್ಯಾಯ. ಹೊಸ ಜವಾಬ್ದಾರಿಯನ್ನು ನಿಭಾಯಿಸುತ್ತೇನೆಂದು ನಾನು ಈ ವಿಚಾರವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಅವಳಿ ಮಕ್ಕಳೊಂದಿಗೆ ಆರು ತಿಂಗಳ ಗರ್ಭಿಣಿಯಾಗಿದ್ದೇನೆ. ನನಗೆ 20-30 ವರ್ಷ ಇದ್ದಾಗ ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಸೆಂಟರ್‌ಗಳು ನನ್ನನ್ನು ತಿರಸ್ಕಾರ ಮಾಡಿದ್ದವು. ಬಳಿಕ ನಾನು ಡಾ.ಸುಷ್ಮಾ ಅವರನ್ನು ಭೇಟಿಯಾದೆ. ಅವರು ನನ್ನ ಮೇಲೆ ಯಾವುದೇ ಕೀಳು ಭಾವನೆಪಡದೇ ಸ್ವಾಗತಿಸಿದರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ” ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.
ಮುಂದುವರೆದು, ”ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಹಾಗೂ ತಂದೆ, ಒಡಹುಟ್ಟಿದವರು ಮತ್ತು ನನ್ನ ಪ್ರೀತಿಪಾತ್ರರು ನನ್ನ ಜೊತೆ ನಿಲ್ಲುವ ಮೂಲಕ ನನಗೆ ಶಕ್ತಿಯಾಗಿದ್ದಾರೆ. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದರೆ, ನನ್ನ ಮನಸ್ಸಿನಲ್ಲಿ ನಾನು ಎಲ್ಲದಕ್ಕೂ ಸಿದ್ಧಳಾಗಿದ್ದೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದರೆ, ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ದಯೆ, ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಬೆಳಯುತ್ತಾರೆ. ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ನನ್ನ ಕಥೆ, ಒಬ್ಬಳೇ ಒಬ್ಬಳು ಮಹಿಳೆಯಾದರೂ ತನ್ನನ್ನು ತಾನು ನಂಬುವಂತೆ ಪ್ರೇರೇಪಿಸಿದರೆ ಸಾಕು. ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಹಾಗೂ ಅದೇ ಎಲ್ಲವೂ ಆಗಿರುತ್ತದೆ” ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಬರೆದುಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post