ಮಂಗಳೂರು: ‘ಅಮೆರಿಕದ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಕಾನೂನು ಶುಲ್ಕವಾಗಿ ₹ 8,546 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ದೇಶದ ಕಾನೂನು ಸಡಿಲಗೊಳಿಸಲು ಈ ಹಣವನ್ನು ಲಂಚದ ರೂಪದಲ್ಲಿ ನೀಡಿರುವ ಅನುಮಾನವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕು’ ಎಂದು ಎಐಸಿಸಿ ವಕ್ತಾರೆ ಅಮೀ ಯಾಜ್ಞಿಕ್ ಆಗ್ರಹಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟು ದೊಡ್ಡ ಮೊತ್ತ ಯಾವ ರಾಜಕಾರಣಿಗಳು, ಅಧಿಕಾರಿಗಳಿಗೆ ಪಾವತಿಯಾಗಿದೆ ಎಂಬುದು ಗೊತ್ತಿಲ್ಲ. ದೇಶದ ಜನರಿಗೆ ಇದನ್ನು ತಿಳಿಯುವ ಹಕ್ಕು ಇದ್ದು, ಪ್ರಧಾನ ಮಂತ್ರಿ ಮೌನ ಮುರಿದು, ಇದಕ್ಕೆ ಉತ್ತರಿಸಬೇಕು’ ಎಂದರು.
‘ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ಎನ್ನುತ್ತಿದೆ. ಆದರೆ, ದೇಶದಲ್ಲಿ ಸಣ್ಣ ಉದ್ಯಮಗಳು, ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಯುವಜನರು ನಿರುದ್ಯೋಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ಮಾಡಿದ್ದ ದೇಶದ ಆಸ್ತಿಯನ್ನು, ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ, ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ದೇಶದ ಆಸ್ತಿ ಸೃಷ್ಟಿಗೆ ನಯಾಪೈಸೆ ಕೊಡುಗೆ ನೀಡದ ಬಿಜೆಪಿ, ಕೇವಲ ಶ್ರೀಮಂತರು, ಬಂಡವಾಳಶಾಹಿಗಳ ಪರವಾಗಿ ಯೋಚಿಸುತ್ತಿದೆ’ ಎಂದು ಆರೋಪಿಸಿದರು.
‘ಒಂದೂವರೆ ವರ್ಷದಲ್ಲಿ ದೇಶದಲ್ಲಿ 14 ಕೋಟಿ ಉದ್ಯೋಗ ನಷ್ಟವಾಗಿದೆ. ಹಿಂಸಾಚಾರ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ ಒಂದೂ ಸುದ್ದಿಗೋಷ್ಠಿ ನಡೆಸದ ಪ್ರಧಾನ ಮಂತ್ರಿ, ‘ಮನ್ ಕೀ ಬಾತ್’ನಲ್ಲಾದರೂ ಇದಕ್ಕೆ ಉತ್ತರ ನೀಡಬಹುದಿತ್ತು’ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ಕುಮಾರ್, ಮುಖಂಡರಾದ ಪಿ.ವಿ. ಮೋಹನ್, ಸದಾಶಿವ ಉಳ್ಳಾಲ್, ಜೋಕಿಂ ಡಿಸೋಜ, ಗಣೇಶ್ ಪೂಜಾರಿ, ಆರಿಫ್ ಬಾವ, ಲಾರೆನ್ಸ್ ಡಿಸೋಜ, ಟಿ.ಕೆ. ಸುಧೀರ್, ನಝೀರ್ ಬಜಾಲ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post