ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ಬಳಿ ಮಂಗಳವಾರ ವೈಷ್ಣವಿ ಕಾರ್ಗೋದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಮಾಲೀಕ ಹಾರಿಸಿದ ಗುಂಡಿನಿಂದ ಆತನ ಮಗನೇ ಗಾಯಗೊಂಡ ಘಟನೆ ನಡೆದಿದೆ.
ಸಂಸ್ಥೆಯ ಮಾಲೀಕ ರಾಜೇಶ್ ಅವರ ಬಳಿ ಕೆಲಸಕ್ಕಿದ್ದ ನೌಕರ ವೇತನದ ಬಗ್ಗೆ ವಿಚಾರಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಮಾಲೀಕರು ಹಾಗೂ ನೌಕರನ ನಡುವೆ ಮಾತಿನ ಚಕಮಕಿ ನಡೆದಿದೆ. ರಾಜೇಶ್ ಕೋಪದಲ್ಲಿ ತಮ್ಮ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವೈಷ್ಣವಿ ಕಾರ್ಗೊ ಸಂಸ್ಥೆಯನ್ನು ರಾಜೇಶ್ ಪ್ರಭು ನಡೆಸುತ್ತಿದ್ದು, ಅವರ ಬಳಿ ಪರವಾನಗಿ ಪಡೆದ ಪಿಸ್ತೂಲ್ ಇದೆ ಎಂಬ ಮಾಹಿತಿ ಇದೆ. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಜೇಶ್ ಪಿಸ್ತೂಲ್‌ನೊಂದಿಗೆ ಸಂಸ್ಥೆಯ ಕಚೇರಿಗೆ ಬಂದಿದ್ದಾರೆ. ಕಚೇರಿ ಬಳಿ ಗೊಂದಲಮಯ ವಾತಾವರಣ ಏರ್ಪಟ್ಟ ವೇಳೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲಿ ಎರಡು ಗುಂಡುಗಳ ಅವಶೇಷ ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.
ರಾಜೇಶ್ ಅವರಿಗೆ ಎಸೆಸೆಲ್ಸಿ ಓದುತ್ತಿರುವ ಸುಧೀಂದ್ರ ಹೆಸರಿನ ಪುತ್ರನಿದ್ದಾನೆ. ರಾಜೇಶ್ ಹಾರಿಸಿದ ಗುಡು, ಪುತ್ರನ ಎಡಕಣ್ಣಿನ ಭಾಗದಲ್ಲಿ ತಾಗಿಕೊಂಡು ತಲೆಭಾಗದಲ್ಲಿ ಹೊಕ್ಕಿದೆ. ಗಾಯಗೊಂಡಿರುವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವೇತನಕ್ಕೆ ಒತ್ತಾಯ: ವಾಗ್ವಾದ,
ರಾಜೇಶ್ ಪ್ರಭು ಅವರ ವಿಚಾರಣೆ ನಡೆಸಲಾಗಿದ್ದು, ಕೆಲ ಮಾಹಿತಿ ತಿಳಿದು ಬಂದಿದೆ. ಅವರ ಕಂಪನಿಯಲ್ಲಿ ಚಂದ್ರು ಮತ್ತು ಅಶ್ರಫ್ ಎಂಬ ಇಬ್ಬರು ಹುಡುಗರಿದ್ದು, ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ಸಾಮಗ್ರಿ ತಲುಪಿಸಿ ಬಂದಿದ್ದ ಇಬ್ಬರು, ₹4 ಸಾವಿರ ವೇತನ ನೀಡುವಂತೆ ಎರಡು ದಿನಗಳಿಂದ ಒತ್ತಾಯಿಸುತ್ತಿದ್ದರು.
ಮಂಗಳವಾರ ಮಧ್ಯಾಹ್ನ ರಾಜೇಶ್ ಪ್ರಭು ಅವರ ಪತ್ನಿಯ ಎದುರು ಇಬ್ಬರೂ ಮತ್ತೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ಅವರ ಪತ್ನಿ ರಾಜೇಶ್ ಪ್ರಭು ಮತ್ತು ಅವರ ಪುತ್ರನನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಪುತ್ರ ಸುಧೀಂದ್ರ, ಚಾಲಕ ಹಾಗೂ ಕ್ಲೀನರ್‌ನ ಕೆನ್ನೆಗೆ ಬಾರಿಸಿದ್ದಾನೆ. ಇದರಿಂದ ವಾಗ್ವಾದ ತಾರಕಕ್ಕೇರಿದ್ದು, ರಾಜೇಶ್ ಪ್ರಭು ರಿವಾಲ್ವರ್ ತೆಗೆದು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಪುತ್ರ ಸುಧೀಂದ್ರನಿಗೆ ತಗುಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post