ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿಯ ಸಾರಸ್ವತ ಬ್ಯಾಂಕ್ ಬಳಿ ಸೆ.28ರಂದು ಮಣ್ಣಗುಡ್ಡೆ ಆಶೀರ್ವಾದ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಭೋಜಪ್ಪ ಅವರಿಗೆ ಹಲ್ಲೆ ಮಾಡಿ 4.20 ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅದೇ ಪೆಟ್ರೋಲ್ ಬಂಕ್‌ನಲ್ಲಿ ನೌಕರನಾಗಿದ್ದ ಶಕ್ತಿನಗರ ನಿವಾಸಿ ಶ್ಯಾಮ್ ಶಂಕರ್, ಮುಂಬೈನ ಬಾರೊಂದರಲ್ಲಿ ಮ್ಯಾನೇಜರ್ ಆಗಿದ್ದ, ಕುಡುಪು ನಿವಾಸಿ ಅಭಿಷೇಕ್ ಯಾನೇ ಅಭಿ, ಪೈಟಿಂಗ್ ಕೆಲಸಕ್ಕೆ ಮಾಡುತ್ತಿದ್ದ ಶಕ್ತಿನಗರ ನಿವಾಸಿಗಳಾದ ಕಾರ್ತಿಕ್ ಮತ್ತು ಸಾಗರ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಸಹಾಯ ಮಾಡಿದವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಕಮೀಷನರ್ ವಿಶೇಷ ತಂಡ ರಚಿಸಿದ್ದು, ಖಚಿತ ಮಾಹಿತಿಯಂತೆ ಅ.4ರಂದು ನಾಲ್ವರನ್ನು ದಸ್ತಗಿರಿ ಮಾಡಿದ್ದಾರೆ. ಹಲ್ಲೆಯಿಂದ ಭೋಜಪ್ಪ ಅವರ ತಲೆ ಹಾಗೂ ಕಿವಿಗೆ ಬಲವಾದ ಪೆಟ್ಟು ಬಿದ್ದಿತ್ತು.
ಹಲವು ಪ್ರಕರಣಗಳಲ್ಲಿ ಭಾಗಿ: ಬಂಧಿತರಲ್ಲಿ ಮೂವರ ಮೇಲೆ ಈಗಾಗಲೇ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಶ್ಯಾಮ್ ಶಂಕರ್ ವಿರುದ್ಧ 2018ರಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅಭಿಷೇಕ್ ವಿರುದ್ಧ ಕಂಕನಾಡಿ ಗ್ರಾಮಾಂತರ ಮತ್ತು ವೇಣೂರು ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಕೊಲೆ ಬೆದರಿಗೆ ಪ್ರಕರಣ ದಾಖಲಾಗಿದೆ. ಕಾರ್ತಿಕ್ ವಿರುದ್ಧವೂ ಕೊಲೆ ಯತ್ನ, ಗಾಂಜಾ ಸೇವೆನೆ ಹಲ್ಲೆ ಪ್ರಕರಣ ದಾಖಲಾಗಿದೆ.
60 ಸಾವಿರ ರೂ. ವಶ: ದರೋಡೆ ಬಳಿಕ ನಾಲ್ವರು ಮುಂಬೈಗೆ ಪರಾರಿಯಾಗಿದ್ದರು. ಅಲ್ಲಿ ಕೆಲವರಿಗೆ ನೀಡಬೇಕಾಗಿದ್ದ ಹಣ ನೀಡಿದ್ದು, ಉಳಿದ ಮೊತ್ತದಲ್ಲಿ ಮೊಬೈಲ್, ಚಿನ್ನ ಖರೀದಿಸಿದ್ದು, ಹುಡುಗಿಯರಿಗಾಗಿಯೂ ಉಪಯೋಗಿಸಿದ್ದಾರೆ. ಸದ್ಯ ಆರೋಪಿಗಳಿಂದ 60 ಸಾವಿರ ರೂ. ಹಾಗೂ ಎರಡು ವಾಹನ, ಮೊಬೈಲ್ ವಶಕ್ಕೆ ಪಡೆಯಲಾಗಿದೆ.