ಮಂಗಳೂರು, ಅ.4: ನಗರದಲ್ಲಿ ಕಾಂತಾರ ಚಿತ್ರ ತಂಡದ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ರಿಷಬ್ ಶೆಟ್ಟಿ, ಕಾಂತಾರ ಚಿತ್ರ ಮಾಡಿದ್ದಲ್ಲ, ಅದು ಆಗಿದ್ದು. ನನ್ನದೇನೂ ಇಲ್ಲ. ಇಡೀ ಚಿತ್ರತಂಡದ ಶ್ರಮ. ಮೇಲಾಗಿ ದೈವ ನರ್ತಕರಾಗಿ ಇಡೀ ಚಿತ್ರದ ಸೀಕ್ವೆನ್ಸ್, ದೈವದ ಚಿತ್ರಣ ಹೀಗೇ ಬರಬೇಕೆಂದು ಹೇಳಿಕೊಟ್ಟ ಮುಕೇಶ್ ಅವರ ಶ್ರಮ ಕಾರಣ ಎಂದು ಹೇಳಿದರು. ಚಿತ್ರದ ಶೂಟಿಂಗ್ ಬಗ್ಗೆ ಹೇಳಿದ ಅವರು, ನಮ್ಮ ದೈವಾರಾಧನೆ ಬಗ್ಗೆ ಇಂದಿನ ಹುಡುಗರಿಗೆ, ಯುವಕರಿಗೆ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಆದರೆ ದೈವಾರಾಧನೆ ಎನ್ನುವುದು ಸಮಾಜದ ಎಲ್ಲರನ್ನೂ ಒಳಗೊಳ್ಳಿಸುವ ಅದ್ಭುತ. ನಮ್ಮ ಮಣ್ಣಿನ ಗುಣವಾಗಿ ಅನಾದಿ ಕಾಲದಿಂದ ಹರಿದು ಬಂದಿದೆ. ಅಂಥ ವೈಶಿಷ್ಟ್ಯವನ್ನು ಇಡೀ ಜಗತ್ತಿಗೆ ತೋರಿಸಬೇಕೆಂದು ಪ್ರಯತ್ನ ಮಾಡಿದ್ದೇನೆ. ದೈವಗಳ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು. ಕಾಂತಾರ ಸಿನಿಮಾ ಅನ್ನು ಇತರ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಬೇಡಿಕೆಗಳು ಬರುತ್ತಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಚಿತ್ರತಂಡ ನಿರ್ಧಾರ ಮಾಡಿ ಘೋಷಿಸಲಿದೆ ಎಂದು ಕಾಂತಾರ ಸಿನಿಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದರು. ಈ ಸಿನಿಮಾ ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಮೊದಲು ಕನ್ನಡದಲ್ಲೇ ಈ ಸಿನಿಮಾವನ್ನು ಮಾಡಬೇಕೆಂಬ ಒತ್ತಾಸೆಯಿಂದ ಕನ್ನಡದಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಘೋಷಿಸಲಾಗುತ್ತದೆ ಎಂದರು.

ಈ ಸಿನಿಮಾದಲ್ಲಿ ದೈವ ನರ್ತಕನ ಪಾತ್ರ ಮಾಡಿದ ದೈವ ನರ್ತಕ ಮುಖೇಶ್ ಅವರು ಮಾತನಾಡಿ, ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧೆ ಭಕ್ತಿಯಿಂದ ಮಾಡಿದೆ. ಮದ್ಯ, ಮಾಂಸವನ್ನು ತ್ಯಜಿಸಿ ಈ ಸಿನಿಮಾವನ್ನು ಮಾಡಲಾಗಿದೆ ಎಂದರು. ಸ್ವತಃ ನಾನು 36 ದಿನಗಳ ಕಾಲ ಶುದ್ಧಾಚಾರ ಪಾಲಿಸಿದ್ದೇನೆ. ನಮ್ಮ ದೈವದ ಶಕ್ತಿಯನ್ನು ಹೊರಗಿನವರಿಗೆ ತೋರಿಸಬೇಕಂದ್ರೆ ನಾವು ಅದರ ಬಗ್ಗೆ ತಿಳಿದುಕೊಂಡಿರಬೇಕು. ಅದಕ್ಕಾಗಿ ದೈವ ನರ್ತಕ ಮುಕೇಶ್ ಅವರನ್ನು ಜೊತೆಗಿಟ್ಟುಕೊಂಡಿದ್ದೇನೆ. ಈ ಚಿತ್ರವನ್ನು ಮುಕೇಶ್ ಮತ್ತು ಇಡೀ ದೈವ ನರ್ತನ ಸೇವೆ ನಡೆಸುವ ಕುಟುಂಬಸ್ಥರಿಗೆ ಅರ್ಪಿಸುತ್ತೇನೆ ಎಂದರು. ಡಬ್ ಮಾಡುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ಹಿಂದಿ, ಮಲಯಾಳಂ, ತೆಲುಗು ಭಾಷೆಗೆ ಡಬ್ ಮಾಡಲು ಅಲ್ಲಿನವರು ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಡಬ್ ಆಗಿ ಬರಲಿದೆ ಎಂದರು.

ಕಾಂತಾರ ಸಿನಿಮಾ ನಾಯಕಿ ಸಪ್ತಮಿ ಗೌಡ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಕನ್ನಡ ಭಾಷೆಯನ್ನು ಕಲಿತುಕೊಂಡಿದ್ದೆ. ಈ ಸಿನಿಮಾ ಬಂದ ಬಳಿಕ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ. ಅಷ್ಟು ಚೆನ್ನಾಗಿ ಪಾತ್ರ ಬಂದಿದೆ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.








Discussion about this post