ಮಂಗಳೂರು, ನ.4: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಏಕ ಭೂ ನಿರ್ವಹಣಾ ವ್ಯವಸ್ಥೆ (ULMS) ಹೆಸರಲ್ಲಿ ಜನಸಾಮಾನ್ಯರಿಗೆ ತೊಂದರೆ ಮಾಡುತ್ತಿದ್ದು, ಎಲ್ಲಿಯೂ ಇಲ್ಲದ ಟೆಲಿಸ್ಕೋಪಿಕ್ ನಿಯಮವು ಜನರಿಗೆ ಕರಾಳವಾಗಿ ಪರಿಣಮಿಸಿದೆ. ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್ ಸೆಟ್ ಬ್ಯಾಕ್ ಎನ್ನುವ ನಿಯಮ ತಂದಿರುವುದು ಅಕ್ಷಮ್ಯ ಮತ್ತು ಸಾಮಾನ್ಯ ಜನರಿಗೆ ಎಸಗಿರುವ ದ್ರೋಹ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನರು 3 ಸೆಂಟ್, 5 ಸೆಂಟ್ ನಲ್ಲಿ ಮನೆ ಕಟ್ಟಬೇಕಿದ್ದರೆ ಸುತ್ತಲೂ ಒಂದೂವರೆ ಮೀಟರ್ ಸ್ಥಳ ಬಿಡಬೇಕೆಂಬ ನಿಯಮ ಮಾಡಲಾಗಿದೆ. ಆದರೆ 70 ಮೀಟರ್ ಎತ್ತರದ ಏಳು ಅಂತಸ್ತಿನ ಕಟ್ಟಡಗಳಿಗೆ ಈ ನಿಮಯ ಸಡಿಲಿಕೆ ಮಾಡಿದ್ದು ಒಂದು ಮೀಟರ್ ಗೆ ಕಡಿತ ಮಾಡಲಾಗಿದೆ. ಕಟ್ಟಡದಲ್ಲಿ ಏನಾದರೂ ಅನಾಹುತಗಳಾದರೆ ಅಗ್ನಿಶಾಮಕ ವಾಹನ ಹೋಗುವುದು ಬಿಡಿ, ಒಂದು ಏಣಿ ಇಡುವುದಕ್ಕೂ ಸಾಧ್ಯವಾಗಲ್ಲ ಎಂದು ಆಕ್ಷೇಪಿಸಿದರು.
15 ವರ್ಷಗಳ ಹಿಂದೆ ನಾನು ಸಚಿವನಾಗಿದ್ದಾಗ ಮಂಗಳೂರು ನಗರದ ಅಭವೃದ್ಧಿ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ತರಲಾಗಿತ್ತು. 2021ರಲ್ಲಿ ಈ ಯೋಜನೆಯನ್ನು ಸರ್ಕಾರ ಸ್ವೀಕರಿಸಿದ್ದರೂ, ಇನ್ನೂ ಜಾರಿಗೆ ತರಲಾಗಿಲ್ಲ. ಈಗ ಅದನ್ನೇ ತಿದ್ದುಪಡಿ ಮಾಡಿ ನಿಯಮಗಳನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ. ಇದರಿಂದಾಗಿ ಕಟ್ಟಡ ಪರವಾನಗಿ ನಿಯಮಗಳು, ಲೇಔಟ್ ಅನುಮೋದನೆಯಲ್ಲಿ ತೊಂದರೆಗಳಾಗಿದ್ದು ಇದನ್ನು ರಾಜ್ಯ ಸರ್ಕಾರ ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಡೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಸೀದಿ, ದೇವಸ್ಥಾನ, ಚರ್ಚ್ ಗಳಿಗೆ 12 ಅಡಿ ಅಗಲದ ರಸ್ತೆಯನ್ನು ಈಗ ಸಡಿಲಿಸಿದ್ದು, ರಸ್ತೆಗಾಗಿ ಜಾಗ ಬಿಟ್ಟುಕೊಟ್ಟ ಜನರಿಗೆ ಅನ್ಯಾಯ ಮಾಡಲಾಗಿದೆ. ನಗರದಲ್ಲಿ ಆರು ಮೀಟರ್ ಮತ್ತು 7.5 ಮೀಟರ್ ರಸ್ತೆಗಳಿಗೆ ಸಂಬಂಧಿಸಿದ ಟಿಡಿಆರ್ ನಿಯಮ ರದ್ದು ಮಾಡಿದ್ದು ಏಕೆ ಎಂದು ಪಾಲೆಮಾರ್ ಪ್ರಶ್ನಿಸಿದರು. ಯುಎಲ್ ಎಂಎಸ್ ನಿಯಮಗಳಿಂದಾಗಿ ಸಣ್ಣ ಮನೆಗಳಿಗೆ ಪರವಾನಗಿ ವಿಳಂಬವಾದರೆ, ದೊಡ್ಡ ಕಟ್ಟಡಗಳಿಗೆ ಶೀಘ್ರವಾಗಿ ಪರವಾನಗಿ ಸಿಗುವಂತೆ ಮಾಡಿದ್ದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಇ-ಖಾತಾ, ರೆವೆನ್ಯೂ ಇಲಾಖೆ, ಮುಡಾ ಮತ್ತು ಮಹಾನಗರ ಪಾಲಿಕೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಕಟ್ಟಡ ಪರವಾನಗಿ ಪಡೆಯಲು ನಾಗರಿಕರು ಅಲೆಯುವಂತಾಗಿದೆ ಎಂದೂ ಪಾಲೆಮಾರ್ ಹೇಳಿದರು.
ಇದರಿಂದಾಗಿ ಬಿಲ್ಡರ್ ಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯ ಎಂಬಂತಾಗಿದೆ. ಹಿಂದಿನ ಸಿಡಿಪಿ ಯೋಜನೆಯಲ್ಲಿ ಜನಪರ ನಿಯಮಗಳಿದ್ದು ಅದನ್ನೀಗ ಕರಾಳ ಎನ್ನುವಂತೆ ಮಾಡಲಾಗಿದೆ. ಮಂಗಳಾ ಕಾರ್ನಿಶ್ ರಸ್ತೆಯನ್ನೂ ಅವೈಜ್ಞಾನಿಕ ರೂಪದಲ್ಲಿ ಜಾರಿಗೊಳಿಸುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಇಂಜಿನಿಯರ್ ಐ. ಯೋಗೀಶ್ ಪೈ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.





Discussion about this post