ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿ, ಸಡಗರದಿಂದ ಲಕ್ಷ ದೀಪೋತ್ಸವ ಶುಕ್ರವಾರ ರಾತ್ರಿ ನೆರವೇರಿತು.
ಪಂಚ ಶಿಖರ ಒಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ಮೊದಲಿಗೆ ಕಾಚುಕುಜುಂಬ ದೈವವು ದೇವರ ಭೇಟಿಯಾಗಿ ನುಡಿಗಟ್ಟು ನುಡಿಯಿತು. ಬಳಿಕ ದೇವರ ಉತ್ಸವ ನಡೆಯಿತು.
ರಥಬೀದಿಯಿಂದ ಕಾಶಿಕಟ್ಟೆವರೆಗೆ ಲಕ್ಷ ಹಣತೆ ದೀಪಗಳನ್ನು ಬೆಳಗಿಸಲಾಗಿತ್ತು. ದೀಪಗಳ ನಡುವೆ ದೇವರ ಉತ್ಸವ ಹಾಗೂ ಲಕ್ಷ ದೀಪೋತ್ಸವ ರಥೋತ್ಸವ ನೆರವೇರಿತು.
ಸಂಘ ಸಂಸ್ಥೆ, ಭಕ್ತರಿಂದ ಭಜನೆ ಹಾಗೂ ಕುಣಿತ ಭಜನೆ ನಡೆಯಿತು. ಕಾಶಿಕಟ್ಟೆವರೆಗೆ ರಥೋತ್ಸವ ನೆರವೇರಿತು. ಈ ವೇಳೆ ಸವಾರಿ ಮಂಟಪದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮ ದೈವದರ್ಶನ ಮತ್ತು ನರ್ತನ ಸೇವೆ ಜರುಗಿತು. ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಬಂದ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ದೇವರ ಗುರ್ಜಿ ಪೂಜೋತ್ಸವ ನೆರವೇರಿತು.
ಚಂದ್ರಮಂಡಲ ರಥೋತ್ಸವ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ನಡೆಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯನ್ನು ಸ್ವಯಂ ಸ್ಫೂರ್ತಿಯಿಂದ ಭಕ್ತರು ಲಕ್ಷ ದೀಪೋತ್ಸವ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವವರೆಗೆ ನೆರವೇರಿಸುತ್ತಾರೆ.
ಉರುಳು ಸೇವೆ ನೆರವೇರಿಸಲು ಈಗಾಗಲೇ ದೇವಳದ ವತಿಯಿಂದ ಪೂರ್ವ ಸಿದ್ಧತಾ ಕಾರ್ಯಗಳನ್ನು ನಡೆಸಲಾಗಿದೆ. ಸೇವೆ ನಡೆಸುವವರಿಗೆ ಮುಖ್ಯ ಸೂಚನೆ ದೇವಳದ ವತಿಯಿಂದ ನೀಡಲಾಗಿದೆ.