ಮಂಗಳೂರು: ‘ಬುರ್ಖಾ ಧರಿಸಿ ಅಸಭ್ಯ ವರ್ತನೆ ಮಾಡುತ್ತಿರುವ ಯುವತಿಯರೇ ಎಚ್ಚೆತ್ತುಕೊಳ್ಳಿ. ಪೋಷಕರೇ ನಮ್ಮ ಸಂಘಟನೆಯ ಕೈಗೆ ಸಿಕ್ಕು ಮಾನ ಹರಾಜಾರಾಗುವ ಮುನ್ನ ಎಚ್ಚೆತ್ತುಕೊಳ್ಳಿ’ ಈ ರೀತಿಯ ಬೆದರಿಕೆ ಸಂದೇಶವೊಂದು ಮುಸ್ಲಿಂ ಡಿಫೆನ್ಸ್ ಫೋರ್ಸ್ (ಎಂಡಿಎಫ್) ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹಿಜಾಬ್, ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಎಂಡಿಎಫ್ ಕಣ್ಣಿಡುತ್ತಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ನಿಗೂಢವಾಗಿ ಕಾರ್ಯಚರಣೆಯನ್ನು ಮಾಡುತ್ತಿವೆ. ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿ
ಯರನ್ನು ಟಾರ್ಗೆಟ್ ಮಾಡುತ್ತಿದೆ. ಈ ಯುವತಿಯರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯ ಸಂದೇಶವನ್ನು ಹಾಕಲಾಗಿದೆ.
‘ಸಿಟಿ ಸೆಂಟರ್ ಮಾಲ್‌ನ ಕಾರ್ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬುರ್ಖಾ ಹಾಕಿಕೊಂಡು ನಿಮ್ಮ ಅಸಭ್ಯ ವರ್ತನೆಗಳನ್ನು ಕಂಡು ನಮ್ಮ ಕಾರ್ಯಕರ್ತರು ಬುದ್ಧಿ ಮಾತು ಹೇಳಿ ಪೋಷಕರಿಗೂ ತಿಳಿಸಿ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಇನ್ನು ಮುಂದೆ ಇಂತಹ ಅಹಿತಕರ ಘಟನೆ ನಮ್ಮ ಕಾರ್ಯಕರ್ತರ ಕಣ್ಣಿಗೆ ಬಿದ್ದರೆ, ಧರ್ಮದೇಟು ಕೊಟ್ಟು ಯಾವುದೇ ಮುಲಾಜಿಲ್ಲದೆ ಕಾರ್ಯ ನಿರ್ವಹಿಸಲಿದ್ದೇವೆ. ಆದ್ದರಿಂದ ಪೋಷಕರೆ ನಿಮ್ಮ-ನಿಮ್ಮ ಮಕ್ಕಳ ಚಲನವಲನಗಳ ಪರಿಶೀಲನೆ ಮಾಡಿ. ಕಾಲೇಜ್‌ಗೆ ಎಷ್ಟು ಗಂಟೆಗೆ ತಲುಪುತ್ತಾಳೆ, ಕಾಲೇಜಿನಿಂದ ಮನೆಗೆ ಎಷ್ಟು ಗಂಟೆಗೆ ತಲುಪುತ್ತಾಳೆ ಎಂದು ಗಮನಿಸಿ’ ಎಂಬ ಎಚ್ಚರಿಕೆ ಎಂಡಿಎಫ್ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿರುವ ಸಂದೇಶದಲ್ಲಿದೆ.
‘ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ಬುರ್ಖಾ ಹಾಕಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮಾಡಿದರೆ ದಾಳಿ ಮಾಡಿ ಧರ್ಮದೇಟು ನೀಡುತ್ತೇವೆ ಎಂದು ಬೆದರಿಕೆ ಹಾಕಿದ ತಂಡದ ವಿರುದ್ಧ ತನಿಖೆ ಆರಂಭಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.