ಮಂಗಳೂರು, ಸೆ.5 : ಸುರತ್ಕಲ್‌ನಲ್ಲಿರುವ ಮುಕ್ಕದ ಲೇಔಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಯುವಕ ಕಾಣೆಯಾದ ಬಗ್ಗೆ ಜುಲೈ 2ರಂದು ದೂರು ದಾಖಲಾಗಿತ್ತು. ಆನಂತರ, ಅದೇ ಯುವಕನ ಶವ ಎಸ್ಟೇಟ್ ಆವರಣದ ಎಸ್ ಟಿಪಿ ಪ್ಲಾಂಟ್ ನಲ್ಲಿ ಆ.21ರಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಸುರತ್ಕಲ್ ಗ್ರಾಮದ ಮುಕ್ಕದ ಲೇಔಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ನಿವಾಸಿ ಮುಖೇಶ್ ಮಂಡಲ್ (27) ಜೂನ್ 24ರ ರಾತ್ರಿ 9 ಗಂಟೆ ಬಳಿಕ ಕಾಣೆಯಾದ ಬಗ್ಗೆ ಆತನ ಜೊತೆ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳದ ವಾಸಿ ದೀಪಾಂಕರ್ ಎಂಬವರು ದೂರು ನೀಡಿದ್ದರು. ಇದರಂತೆ, ನಾಪತ್ತೆ ದೂರು ದಾಖಲಾಗಿತ್ತು. ಈ ಮಧ್ಯೆ ಆ. 21ರಂದು ಬೆಳಿಗ್ಗೆ 10 ಗಂಟೆಗೆ ಮುಖೇಶ್ ಮಂಡಲ್ ಮೃತದೇಹವು STP ಟ್ಯಾಂಕ್ ಒಳಗೆ ಕೊಳೆತು ಸ್ಥಿತಿಯಲ್ಲಿ ಪತ್ತೆಯಾಗಿದೆ.
ತನಿಖೆಯಲ್ಲಿ ಮುಖೇಶ್ ಮಂಡಲ್ ನನ್ನು ಅಲ್ಲಿಯೇ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಮಂಡಲ್ ಎಂಬಾತ ಕೊಲೆ ಮಾಡಿ ಎಸ್‌ಟಿಪಿ ಟ್ಯಾಂಕ್ ಗೆ ಹಾಕಿ, ಪ್ಲೈವುಡ್ ಶೀಟ್ ಹಾಕಿ ಮುಚ್ಚಿ ಕೊಲೆಯನ್ನು ಮರೆ ಮಾಚಿರುವ ಬಗ್ಗೆ ಚೇತನ್ ಎಂಬವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಪತ್ತೆಗಾಗಿ ಪಿಎಸ್.ಐ ಶಶಿಧರ ಶೆಟ್ಟಿ ಹಾಗೂ ಎಎಸ್.ಐ ರಾಜೇಶ್ ಆಳ್ವ ಅವರಿದ್ದ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಲಾಗಿತ್ತು. ಪಿಎಸ್ಐ ಶಶಿಧರ ಶೆಟ್ಟಿ ಅವರ ತಂಡ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದ್ದ ಆರೋಪಿ ಲಕ್ಷ್ಮಣ್ ಮಂಡಲ್ (30)ನನ್ನು ಬಂಧಿಸಿ ಕರೆತಂದಿದೆ.
ಜೂನ್ 24ರಂದು ರಾತ್ರಿ 9 ಗಂಟೆಗೆ ಮುಕ್ಕದ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡದೊಳಗೆ ಲಕ್ಷ್ಮಣ್ ಮಂಡಲ್ ಹಾಗೂ ಮುಖೇಶ್ ಮಂಡಲ್ ಮದ್ಯಪಾನವನ್ನು ಮಾಡುತ್ತಿದ್ದರು. ಈ ವೇಳೆ, ಮುಕೇಶ್ ಆರೋಪಿ ಲಕ್ಷ್ಮಣ್ ಪತ್ನಿಯ ಅಶ್ಲೀಲ ವೀಡಿಯೋಗಳನ್ನು ಸಂಗ್ರಹಿಸಿ ತನ್ನ ಮೊಬೈಲ್ ನಲ್ಲಿ ತೋರಿಸಿದ್ದ. ಇದರಿಂದ ಕೋಪಗೊಂಡ ಆರೋಪಿ ಪಕ್ಕದ ರೂಮಿನಲ್ಲಿದ್ದ ಕಬ್ಬಿಣದ ಸರಳನ್ನು ತಂದು ತಲೆಗೆ ಹೊಡೆದು ಕೊಲೆ ಮಾಡಿದ್ದು ಕೊಲೆಯನ್ನು ಮರೆ ಮಾಚಲು ಶವವನ್ನು ಅಲ್ಲಿಯೇ ಇದ್ದ ಎಸ್‌ಟಿಪಿ ಟ್ಯಾಂಕ್ ನೊಳಗೆ ಹಾಕಿರುವುದಾಗಿ ತಪ್ಪೊಪ್ಪಿದ್ದಾನೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯನ್ನು 5 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿ ಲಕ್ಷ್ಮಣ್ ಮಂಡಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿದೆ.
ಎಸಿಪಿ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಭೇದಿಸಲಾಗಿದ್ದು, ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ತನಿಖಾ ತಂಡದಲ್ಲಿ ಪಿಎಸ್‌ಐಗಳಾದ ರಘುನಾಯಕ್, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ್ ಶೆಟ್ಟಿ; ಎಎಸ್‌ಐಗಳಾದ ರಾಜೇಶ್ ಆಳ್ವಾ, ತಾರಾನಾಥ; ಮತ್ತು ಪೊಲೀಸ್ ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ಮೋಹನ್ ಮತ್ತು ನಾಗರಾಜ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post