ಮಂಗಳೂರು: ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬಜ್ಜೋಡಿ ಬಿಕರ್ನಕಟ್ಟೆಯ ಬರ್ನಾಡ್ ರೋಶನ್ ಮಸ್ಕರೇನಸ್(41) ಬಂಧಿತ ಆರೋಪಿ. ಈತ ಮಂಗಳೂರು ನಗರದ ಕಂಕನಾಡಿ ಪಂಪ್‌ವೆಲ್‌ನ ಹಳೆ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ “ಹೆಲ್ಪ್ ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಅಂಕ ಪ್ರಮಾಣಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಟ್ಟು ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿದ್ದ.
ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋ ಮೆಟ್ರಿಕ್ ಡಿವೈಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರವರಾದ ಅನುಪಮ್ ಅಗರ್ ವಾಲ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರು ನಡೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post