ಉಳ್ಳಾಲ: ಶಿವಮೊಗ್ಗ ರಾಗಿಗುಡ್ಡದಂತೆಯೇ ಮಂಗಳೂರಿನ ಉಳ್ಳಾಲದಲ್ಲಿಯೂ ಈದ್ ಮಿಲಾದ್ ಮೆರವಣಿಗೆಯ ನೆಪದಲ್ಲಿ ಯುವಕರು ಪುಂಡಾಟ ಮೆರೆದಿದ್ದು, ಇದೀಗ ಯುವಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ನಡೆಸಿದ ನೂರಾರು ಯುವಕರ ತಂಡ ಉಳ್ಳಾಲದ ಅಬ್ಬಕ್ಕ ಸರ್ಕಲ್ ಬಳಿ ರಸ್ತೆ ಬಂದ್ ಮಾಡಿ ಅಬ್ಬಕ್ಕ ವೃತ್ತವನ್ನೇರಿ ಹಸಿರು ಬಾವುಟ ಪ್ರದರ್ಶಿಸಿ ಚೀರಾಡುತ್ತಾ, ಸೈಲೆನ್ಸರ್ ಶಬ್ಧ ಮಾಡಿ, ಬೈಕ್ ಹಾರ್ನ್ ಹಾಕಿಕೊಂಡು ಪುಂಡಾಟ ಮೆರೆದಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿವಮೊಗ್ಗ ಘಟನೆಯ ಬೆನ್ನಲ್ಲೇ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಪುಂಡಾಟ ಮೆರೆದ ಯುವಕರಿಗೆ ನೋಟಿಸ್ ನೀಡಿದ್ದಾರೆ.
ಉಳ್ಳಾಲ ಪೊಲೀಸರು ವೀಡಿಯೋ ಆಧರಿಸಿ ಯುವಕರ ಪತ್ತೆ ಮಾಡಿದ್ದಾರೆ. ಉಳ್ಳಾಲ, ಮಂಜನಾಡಿ, ಮದಕ, ಕೋಣಾಜೆ, ದೇರಳಕಟ್ಟೆ, ಬಂಟ್ವಾಳ ಹಾಗೂ ಬೆಳ್ತಂಗಡಿ ಭಾಗದ ಯುವಕರು ಎಂದು ತಿಳಿದು ಬಂದಿದೆ. ಈ ಎಲ್ಲಾ ಯುವಕರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
Discussion about this post