ಉಳ್ಳಾಲ : ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ನೀಡಿದರೆಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದ ಮಾತ್ರೆ ಹಾಕಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಮಾತ್ರೆ ಬೆರೆತ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.
ಉಳ್ಳಾಲದ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಇದಾಗಿದ್ದು, ಇದೀಗ ಶಾಲೆಯ ಆಡಳಿತ ಮಂಡಳಿ ತುರ್ತು ಎಸ್ ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ನಿರ್ಧರಿಸಿದೆ. ಶಾಲೆಯಲ್ಲಿ ನಡೆಯುವ ಘಟಕ ಪರೀಕ್ಷೆಯ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೇ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಅನ್ನುವ ದ್ವೇಷವೂ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು.
ಇದರ ಸೇಡು ತೀರಿಸುವ ಸಲುವಾಗಿ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ಆರನೇ ತರಗತಿ ವಿದ್ಯಾರ್ಥಿನಿ ಶಿಕ್ಷಕಿಯ ನೀರಿನ ಬಾಟಲಿಗೆ ಮಾತ್ರೆ ಹಾಕಲು ಪ್ಲ್ಯಾನ್ ಮಾಡಿದ್ದಳು. ಅದರಂತೆ ಎಲ್ಲಿಂದಲೋ ಅವಧಿ ಮುಗಿದ ಮಾತ್ರೆಗಳನ್ನು ತಂದಿದ್ದಳು. ಸ್ಟಾಫ್ ರೂಮ್ ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಇಬ್ಬರೂ ವಿದ್ಯಾರ್ಥಿನಿಯರು ಸೇರಿ ಗಣಿತ ಶಿಕ್ಷಕಿಗೆ ಸೇರಿದ ವಾಟರ್ ಬಾಟಲಿಗೆ ತಾವು ತಂದ ಮಾತ್ರೆಗಳನ್ನು ಹಾಕಿದ್ದಾರೆ. ಇದೇ ಬಾಟಲಿಯ ನೀರನ್ನು ಗಣಿತ ಶಿಕ್ಷಕಿ ಜತೆ ಇನ್ನೋರ್ವ ಶಿಕ್ಷಕಿಯೂ ಕುಡಿದಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಶಿಕ್ಷಕಿಯೊಬ್ಬರಿಗೆ ಅಸ್ವಸ್ಥತೆ ಕಂಡುಬಂದಿದೆ. ಇನ್ನೋರ್ವ ಶಿಕ್ಷಕಿಗೆ ಮುಖದಲ್ಲಿ ಊತ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.
ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಕಾರುಬಾರು ಮಾಡುವ ವಿದ್ಯಾರ್ಥಿನಿಯ ನಡೆಗೆ ಇಡೀ ಶಾಲಾ ಆಡಳಿತ ಮಂಡಳಿ, ಹೆತ್ತವರು ನಿಬ್ಬೆರಗಾಗಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಗಳು ಶಿಕ್ಷಣವನ್ನು ವ್ಯಾವಹಾರಿಕ ಮತ್ತು ಸ್ಪರ್ಧಾತ್ಮಕ ರೀತಿ ನಡೆಸುತ್ತಿರುವುದು, ಪೋಷಕರು ಮಕ್ಕಳನ್ನ ರ್ಯಾಂಕ್ ಮೆಷಿನ್ ಗಳಂತೆ ಬಿಂಬಿಸುತ್ತಿರುವುದರ ಪರಿಣಾಮ ಇಂತಹ ಕೃತ್ಯಗಳನ್ನ ವಿದ್ಯಾರ್ಥಿಗಳು ನಡೆಸುತ್ತಿದ್ದಾರೆ ಎಂಬ ಕಳವಳ ಉಂಟಾಗಿದೆ. ಕೃತ್ಯವೆಸಗಿದ ವಿದ್ಯಾರ್ಥಿನಿಯರನ್ನು ಶಾಲಾಡಳಿತವು ತರಾತುರಿಯಲ್ಲಿ ಟಿ.ಸಿ ಕೊಟ್ಟು ಡಿಬಾರ್ ಮಾಡಲು ಮುಂದಾಗಿದ್ದು ಆ ಮೂಲಕ ಶಾಲೆಯ ಮಾನ ಕಾಪಾಡಲು ಹೊರಟಿದೆ.
ಪ್ರಕರಣ ಕಾನೂನು ವ್ಯಾಪ್ತಿಗೆ ಬಂದರೆ ಮಾತ್ರ ಕಾನೂನಿನೊಂದಿಗೆ ಸಂಘರ್ಷ ಮೆರೆದ ಅಪ್ರಾಪ್ತ ವಿದ್ಯಾರ್ಥಿನಿಯರನ್ನ ಸಲಹಾ ಕೇಂದ್ರದಲ್ಲಿ ಸಮಾಲೋಚನೆ ನಡೆಸಲು ಸಾಧ್ಯ. ಸದ್ಯ ಪೊಲೀಸ್ ದೂರು ದಾಖಲಾಗಿಲ್ಲ. ಶಿಕ್ಷಣ ಇಲಾಖೆಯೂ ಪ್ರಕರಣವನ್ನು ಗಂಭೀರ ಪರಿಗಣಿಸಿ ವಿಚಾರಣೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post