ಮಂಗಳೂರು, ಡಿ.5: ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದ ದುಬೈನ ಶಾರ್ಜಾಕ್ಕೆ ಹೊರಟಿದ್ದ ಕುಟುಂಬದ ಮಹಿಳೆಗೆ ಹೃದಯಾಘಾತ ಆಗಿದ್ದು ಏರ್ ಇಂಡಿಯಾ ವಿಮಾನವನ್ನು ತುರ್ತಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಕಣ್ಣೂರಿನಿಂದ ಶಾರ್ಜಾಕ್ಕೆ ಹೊರಟಿದ್ದ ವಿಮಾನದಲ್ಲಿ ಮಹಿಳೆಗೆ ತೊಂದರೆ ಉಂಟಾಗಿದ್ದು ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಎದುರಿಸಿದ್ದರು. ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದು ಪತಿಯೊಂದಿಗೆ ಶಾರ್ಜಾಕ್ಕೆ ತೆರಳುತ್ತಿದ್ದಾಗ ಡಿ.3 ರಂದು ಘಟನೆ ನಡೆದಿದೆ. ಈ ಬಗ್ಗೆ ಏರ್ಪೋರ್ಟ್ ಆಪರೇಶನ್ ಕಂಟ್ರೋಲ್ ಸೆಂಟ್ರಲ್ ಗೆ ಬೆಳಗ್ಗೆ 9.20 ಕ್ಕೆ ಸಂದೇಶ ಬಂದಿದ್ದು ಮಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ವಿಮಾನವನ್ನು ತುರ್ತಾಗಿ ನಿಲ್ದಾಣದಲ್ಲಿ ಇಳಿಸಿ, ಮೂರು ಮಕ್ಕಳು ಮತ್ತು ಮಹಿಳೆ ಹಾಗೂ ಪತಿಯನ್ನು ಅಧಿಕಾರಿಗಳು ನೇರವಾಗಿ ಎಜೆ ಆಸ್ಪತ್ರೆಗೆ ಕರೆತಂದಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆ ವಿಮಾನ ಲ್ಯಾಂಡ್ ಆಗಿದ್ದು 17 ನಿಮಿಷದಲ್ಲಿ ಎಜೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಕೂಡ ಮಹಿಳೆ ಜೊತೆಗೆ ಬಂದಿದ್ದರು.
ವೈದ್ಯರು ಬಳಿಕ ಚಿಕಿತ್ಸೆ ನೀಡಿದ್ದು ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಅದರಂತೆ, ಮಹಿಳೆ ಮತ್ತು ಕುಟುಂಬವನ್ನು ಅದೇ ದಿನ ರಾತ್ರಿ 11 ಗಂಟೆಗೆ ಶಾರ್ಜಾಕ್ಕೆ ಕರೆದೊಯ್ಯಲು ಏರ್ಪೋರ್ಟ್ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.