ಬೆಂಗಳೂರು, ಮೇ 6: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಪೆನ್ ಡ್ರೈವ್ ವಿಡಿಯೋ ಹಂಚಿಕೆ ಮಾಡಿದ್ದೇ ಡಿಕೆ ಶಿವಕುಮಾರ್. ಇದಲ್ಲದೆ, ಈ ಪ್ರಕರಣದ ವಿಚಾರದಲ್ಲಿ ನಮ್ಮೊಂದಿಗೆ ನೀವು ಸಹಕರಿಸಬೇಕು ಎಂದು ಡಿಕೆ ಶಿವಕುಮಾರ್ ಅವರೇ ನನಗೆ ದೊಡ್ಡ ಆಫರ್ ಮಾಡಿದ್ದಾರೆ ಎಂದು ವಿಡಿಯೋ ಹಂಚಿಕೆ ಕುರಿತ ಆರೋಪಕ್ಕೀಡಾದ ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಡ್ರೈವರ್ ಕಾರ್ತಿಕ್ ನನಗೆ ಕೊಟ್ಟಿದ್ದ ವಿಡಿಯೋಗಳೇ ಬೇರೆ ಇದ್ದವು. ಈಗ ಬಿಡುಗಡೆ ಆಗಿರುವ ವಿಡಿಯೋಗಳೇ ಬೇರೆ ಇವೆ. ಬೇರೆ ವಿಡಿಯೋಗಳನ್ನು ಸೇರಿಸಿ ಮಾರ್ಫ್ ಮಾಡಿ ಬಿಡುಗಡೆ ಮಾಡಿದ್ದಾರೆ. ಇವೆಲ್ಲವನ್ನೂ ಮಾಡಿಸಿದ್ದು ಮಹಾನಾಯಕ ಡಿಕೆಶಿ ಅವರೇ ಆಗಿದ್ದಾರೆ. ದೇಶಾದ್ಯಂತ ಸುದ್ದಿ ಮಾಡಿಸಬೇಕು, ಪ್ರಧಾನಿ ಮೋದಿಯವರ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ದೂರಾಲೋಚನೆ ಇದರ ಹಿಂದಿದೆ ಎಂದರು.
ಇನ್ನು, ಸಂತ್ರಸ್ತೆಗೆ ಕಾಂಗ್ರೆಸ್ ಪಕ್ಷದವರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಬೇಲೂರಿನ ಅರೇಹಳ್ಳಿಗೆ ಯಾರು ಹೋಗಿದ್ರು, ಎಷ್ಟು ಗಾಡಿ ಹೋಗಿತ್ತು, ಯಾರನ್ನು ಕರಕೊಂಡು ಬಂದ್ರು ಇವೆಲ್ಲವನ್ನೂ ವಿಚಾರಿಸಿ. ಹಾಸನದಲ್ಲಿ ಸ್ಕೈ ಬರ್ಡ್ ಹೋಟೆಲ್ನಲ್ಲಿ ಸಂತ್ರಸ್ತೆ ಮಹಿಳೆ ಜೊತೆ ಶ್ರೇಯಸ್ ಪಟೇಲ್ ಎಷ್ಟು ಹೊತ್ತು ಮಾತನಾಡಿದ್ದಾರೆ ಎಂಬುದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ನೋಡಿ ಎಂದಿದ್ದಾರೆ. ಎಲ್ಲಾ ಸಾಕ್ಷ್ಯ ಕೊಟ್ಟ ನನ್ನನ್ನೇ ಕೇಸ್ನಲ್ಲಿ ಎ1 ಆರೋಪಿ ಮಾಡೋಕೆ ನೋಡಿದ್ರು. ವಕೀಲನಾಗಿ ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ದೇವರಾಜೇಗೌಡ ವಿವರಿಸಿದ್ದಾರೆ.
ಗೃಹ ಸಚಿವರನ್ನು ಭೇಟಿಯಾಗಿ ಮನವಿ ನೀಡುತ್ತೇವೆ. ಜೊತೆಗೆ, ಮುಖ್ಯ ಕಾರ್ಯದರ್ಶಿ ಅವರನ್ನೂ ಭೇಟಿಯಾಗುತ್ತೇವೆ. ಅಲ್ಲದೆ, ಹೈಕೋರ್ಟಿಗೆ ದೂರು ಕೊಟ್ಟು ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ ಎಂದು ದೇವರಾಜೇ ಗೌಡ ಹೇಳಿದರು. ಸಂತ್ರಸ್ತೆಯರನ್ನು ಕಾಂಗ್ರೆಸ್ ಮುಖಂಡರೇ ಹಣ ಕೊಟ್ಟು ಹೇಳಿಕೆ ನೀಡಿಸಿದ್ದಾರೆ. ಸಂತ್ರಸ್ತೆಯರು ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭೇಟಿಯಾಗಿದ್ದಾರೆ ಎಂದು ಹೇಳಿದ ಶಿವರಾಮೇಗೌಡ ತನ್ನ ಕಚೇರಿಗೆ ಬಂದಿದ್ದ ಸಿಸಿಟಿವಿ ವಿಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು. ಡಿಕೆಶಿ ಮತ್ತು ಶಿವರಾಮೇಗೌಡರ ಜೊತೆಗೆ ಮಾತನಾಡಿರುವ ಎರಡೂವರೆ ಗಂಟೆಯ ಆಡಿಯೋ ಇದೆ. ಅದನ್ನು ತನಿಖಾ ತಂಡಕ್ಕೆ ನೀಡುತ್ತೇನೆ. ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿದರೆ ತಿರುಚುವ ಸಾಧ್ಯತೆಯಿದೆ ಎಂದು ಆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post