ಬೆಂಗಳೂರು, ಜೂನ್ 6: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 11 ಮಂದಿ ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಯಾಗಿದ್ದಾರೆ. ಐವಾನ್ ಡಿಸೋಜ, ಸಿಟಿ ರವಿ, ಬೋಸರಾಜು ಸೇರಿ 11 ಮಂದಿ ಅವಿರೋಧ ಆಯ್ಕೆಯಾಗಿದ್ದು, ಸದ್ದಿಲ್ಲದೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಮಂಗಳೂರಿನ ಕ್ರೈಸ್ತ ಮುಖಂಡ ಐವಾನ್ ಡಿಸೋಜ ಎರಡನೇ ಬಾರಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಕಾಂಗ್ರೆಸಿನಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಕೆ.ಗೋವಿಂದ ರಾಜು, ಬಿಲ್ಕಿಸ್ ಬಾನೋ, ಜಗದೇವ್ ಗುತ್ತೇದಾರ್ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸಿಟಿ ರವಿ, ಎನ್.ರವಿಕುಮಾರ್, ಮರಾಠ ಸಮುದಾಯದ ಮುಖಂಡ ಮಾರುತಿ ರಾವ್ ಮುಳೆ ಮತ್ತು ಜೆಡಿಎಸ್ ನಿಂದ ಜಯರವಿ ಗೌಡ ಅವರು ಪರಿಷತ್ತಿಗೆ ಆಯ್ಕೆಗೊಂಡಿದ್ದಾರೆ. 11 ಸ್ಥಾನದ ಆಯ್ಕೆಗೆ ಜೂನ್ 13ರಂದು ಚುನಾವಣೆ ಘೋಷಿಸಲಾಗಿತ್ತು. 11 ಸ್ಥಾನಕ್ಕೆ ಅಷ್ಟೇ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಇಲ್ಲದೆ ಆಯ್ಕೆ ಆದಂತಾಗಿದೆ. ಒಂದು ಸ್ಥಾನದ ಆಯ್ಕೆಗೆ 19 ವಿಧಾನಸಭೆ ಸದಸ್ಯರ ಬಲ ಅಗತ್ಯ ಇತ್ತು. ಸಂಖ್ಯಾಬಲದ ಆಧಾರದಲ್ಲಿ 36 ಸದಸ್ಯರಿರುವ ಕಾಂಗ್ರೆಸಿನಿಂದ ಏಳು ಮಂದಿಯನ್ನು ಆಯ್ಕೆ ಮಾಡಲಾಗಿತ್ತು.
ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಐವನ್ ಡಿ’ಸೋಜಾ ಅವರಿಗೆ ಚುನಾವಣಾ ಅಧಿ ಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಸದಸ್ಯತ್ವ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಈ ವೇಳೆ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಮತ್ತು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಇತರ ಶಾಸಕರು, ಐವನ್ ಪತ್ನಿ ಡಾ| ಕವಿತಾ ಡಿ’ಸೋಜಾ ಉಪಸ್ಥಿತರಿದ್ದರು.
Discussion about this post