ಪಡುಬಿದ್ರಿ : ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಬಂಧಿತರು.
ಶುಕ್ರವಾರ ಮುಂಜಾನೆ ಹೆಜಮಾಡಿ ಟೋಲ್ ಗೇಟ್ ಬಳಿ ಬಂದ ಫಾರ್ಚುನರ್ ಕಾರಿನಲ್ಲಿ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಕಾರಿನ ಚಾಲಕನ ಬಳಿ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ನಮ್ಮನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುತ್ತೀರಾ? ಎಂದು ಕೇಳಿ ಪೊಲೀಸರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದಾರೆ ಎಂಬ ಆರೋಪ ಇದೆ. ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿ ಅಲ್ಲಿನ ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಟೋಲ್ ಗೇಟ್ ಬಳಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಿನಲ್ಲಿದ್ದ ಉಳಿದ ಆರೋಪಿಗಳಾದ ಸಫ್ವಾನ್ ಕಾಪು, ಅಜೀಂ ಕಾಪು ಮತ್ತು ರಾಜಿಕ್ ಬಜಪೆ ಎಂಬವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಾದ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಎಂಬವರನ್ನು ಇಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಮೊಹಮ್ಮದ್ ರಾಜಿಕ್ ಬಜ್ಪೆ ಎಂಬಾತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post