ಉಡುಪಿ, ಫೆ 07: ಹತ್ತು ವರ್ಷಗಳ ಬಳಿಕ ಕರಾವಳಿಯಲ್ಲಿ ಭಾಗದಲ್ಲಿ ಮತ್ತೆ ನಕ್ಸಲರ ಚುಟುವಟಿಕೆ ಶುರುವಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಉಡುಪಿ ಜಿಲ್ಲೆಯ ಕಾಡುಗಳಿರುವ ಭಾಗದಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾದಂತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಸ್ಥಳಕ್ಕೆ ಕಾರ್ಕಳ, ಹೆಬ್ರಿಯಲ್ಲಿದ್ದ ಏಂಟಿ ನಕ್ಸಲ್ ಫೋರ್ಸ್ ದಳದವರು ತೆರಳಿದ್ದು ಕೂಂಬಿಂಗ್ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಸೇರಿದಂತೆ ಚಿಕ್ಕಮಗಳೂರಿನ ಹಲವೆಡೆ ಅರಣ್ಯ ಪ್ರದೇಶದಲ್ಲಿ ನಕ್ಸಲರ ಓಡಾಟ ಕಂಡುಬಂದಿದೆ ಎನ್ನಲಾಗುತ್ತಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಕೂಡ ಚುರುಕಾಗಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳ ಭಾಗದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ಹಾಗೂ ಎನ್‌ಕೌಂಟರ್‌ಗಳು ಹೆಚ್ಚಾಗುತ್ತಿದ್ದು, ಹೀಗಾಗಿ ನಕ್ಸಲರು ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಉಡುಪಿ ಜಿಲ್ಲೆಯ ಬೈಂದೂರಿಗೆ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇತ್ತೀಚಿಗೆ ನಕ್ಸಲರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಹಸಿರು ಬಣ್ಣದ ಡ್ರೆಸ್ ಕೋಡ್‌ನೊಂದಿಗೆ ನಾಲ್ವರ ತಂಡ ಹಲವು ಮನೆಗಳಿಗೆ ಭೇಟಿ ನೀಡಿ ತೆರಳುತ್ತಿದ್ದಾರೆ. ಇಬ್ಬರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕಳೆದ ಎರಡು ತಿಂಗಳಿನಿಂದ ನಕ್ಸಲರು ಸಕ್ರೀಯ ಆಗಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿದೆ. ವಿಕ್ರಮ್ ಗೌಡ ಸುಮಾರು 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದು, ಕೇರಳದಲ್ಲಿ ಈತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಈತನ ತಂಡದವರು ಸಶಸ್ತ್ರಧಾರಿಯಾಗಿ ಬೈಂದೂರಿಗೆ ಆಗಮಿಸಿರುವ ಶಂಕೆ ವ್ಯಕ್ತವಾಗಿದೆ. ನಾಲ್ವರು ಗ್ರಾಮದ ಮನೆಗಳಿಗೂ ತೆರಳಿ ಹೋಗಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ.
ಸದ್ಯಕ್ಕೆ ಕಾರ್ಕಳ, ಹೆಬ್ರಿ ಮತ್ತು ಅಮಾಸೆಬೈಲು ಪರಿಸರದಲ್ಲಿ ಕ್ಯಾಂಪ್ ಹಾಕಿದ್ದ ಎಎನ್ಎಫ್ ಪಡೆ ಅಲರ್ಟ್ ಆಗಿದ್ದು, ಕುಂದಾಪುರ, ಬೈಂದೂರಿನತ್ತ ತೆರಳಿದೆ. ಕಾಡು ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ಮುಂದಾಗಿದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post