ತಿರುವನಂತಪುರಂ: 2017ರಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಕೇರಳ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ದಿಲೀಪ್ 8ನೇ ಆರೋಪಿಯಾಗಿದ್ದು, ಪ್ರಮುಖ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸಿನಿಮಾ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ್ರಸ್ತ ನಟಿಯನ್ನು 2017ರ ಫೆಬ್ರವರಿ 17ರಂದು ರಾತ್ರಿ ಕೆಲವರು ಅಪಹರಿಸಿ, ಎರಡು ಗಂಟೆಗಳ ಕಾಲ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಎರ್ನಾಕುಲಂ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ.ವರ್ಗೀಸ್, ನಟ ದಿಲೀಪ್ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಇತರೆ ಆರೋಪಿಗಳಾದ ಸುನಿಲ್ ಎನ್ಎಸ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೇಶ್ ವಿಪಿ, ಸಲೀಂ ಎಚ್, ಪ್ರದೀಪ್ ಮತ್ತು ಚಾರ್ಲಿ ಥಾಮಸ್ ಅವರು ತಪ್ಪಿತಸ್ಥರೆಂದು ಘೋಷಿಸಿದ್ದಾರೆ.
ದಿಲೀಪ್ ಅವರ ಮೂಲ ಹೆಸರು ಪಿ.ಗೋಪಾಲಕೃಷ್ಣನ್. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಜೈಲಿನಿಂದಲೇ ಇವರಿಗೆ ಪತ್ರ ಬರೆದಿದ್ದ ಎಂಬ ವಿಚಾರ ತನಿಖೆಯಲ್ಲಿ ಗೊತ್ತಾದ ಬಳಿಕ ದಿಲೀಪ್ ಅವರನ್ನು ಪೊಲೀಸರು ಬಂಧಿಸಿದ್ದರು. 2017ರ ಅಕ್ಟೋಬರ್ 3ರಂದು ದಿಲೀಪ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120ಎ (ಪಿತೂರಿ), 120ಬಿ (ಅಪರಾಧ ಪಿತೂರಿ), 109 (ಅಪರಾಧಕ್ಕೆ ಕುಮ್ಮಕ್ಕು), 366 (ಅಪಹರಣ), 354 (ದೌರ್ಜಜ್ಯ ಅಥವಾ ಮಹಿಳೆಯ ಮಾನಹಾನಿ ಮಾಡುವ ಉದ್ದೇಶದಿಂದ ಆಕೆಯ ಮೇಲೆ ಕ್ರಿಮಿನಲ್ ಬಲಪ್ರಯೋಗ), 354B (ಮಹಿಳೆಯ ವಿವಸ್ತ್ರಗೊಳಿಸಲು ಕ್ರಿಮಿನಲ್ ಬಲಪ್ರಯೋಗ), 357 (ವ್ಯಕ್ತಿಯನ್ನು ತಪ್ಪಾಗಿ ಬಂಧಿಸಲು ಕ್ರಿಮಿನಲ್ ಬಲಪ್ರಯೋಗ), 376D (ಸಾಮೂಹಿಕ ಅತ್ಯಾಚಾರ), 201 (ಸಾಕ್ಷ್ಯಗಳ ನಾಪತ್ತೆ ಕಾರಣವಾಗುವುದು), 212 (ಅಪರಾಧಿಗೆ ಆಶ್ರಯ ನೀಡುವುದು) ಮತ್ತು 34 (ಸಾಮಾನ್ಯ ಉದ್ದೇಶ)ದಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದಿಲೀಪ್ ವಿರುದ್ಧ ಹೆಚ್ಚುವರಿಯಾಗಿ ಸಾಕ್ಷ್ಯಿ ನಾಶದ ಆಧಾರದ ಮೇಲೆ ಐಪಿಸಿ ಸೆಕ್ಷನ್ 204ರ ಅಡಿ ಪ್ರಕರಣ ದಾಖಲಿಸಲಾಗಿತ್ತು. 2017ರಲ್ಲಿ ನವೆಂಬರ್ನಲ್ಲಿ ಪೊಲೀಸರು ದಿಲೀಪ್ ಸೇರಿದಂತೆ ಏಳು ಜನರ ಮೇಲೆ ಹೆಚ್ಚುವರಿ ಚಾರ್ಚ್ಶೀಟ್ ಸಲ್ಲಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post