ಮುಂಬೈ: ಟೀಂ ಇಂಡಿಯಾದ ಹೊಡಿಬಡಿ ಆಟಗಾರ, ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ತೋರಿದ ಅಬ್ಬರದ ಬ್ಯಾಟಿಂಗ್ ನೋಡಿ ಕನ್ನಡಿಗ ಕೆ.ಎಲ್ ರಾಹುಲ್ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದ ಮೂಲಕ ತುಳು ಭಾಷೆಯಲ್ಲಿ ಪ್ರಶಂಸಿದ್ದರು. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಸೂರ್ಯ ಕುಮಾರ್ ಅವರ ಪತ್ನಿ ದೀವಿಶಾ ಶೆಟ್ಟಿ ಅವರಿಗೆ ತುಳು ಕಲಿಸುವಂತೆ ಮನವಿ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಮಿಸ್ಟರ್ 360 ಡಿಗ್ರಿ ಪ್ಲೇಯರ್ ಖ್ಯಾತಿಯ ಸೂರ್ಯ ತನ್ನ ವಿಸ್ಫೋಟಕ ಆಟದ ಮೂಲಕ ರಾಜ್‍ಕೋಟ್‍ನಲ್ಲಿ ರಾಜನಾಗಿ ಮೆರೆದಾಡಿದ್ದರು. ಬ್ಯಾಟಿಂಗ್‍ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ಸೂರ್ಯನ ಆಟ ಕಂಡು ಅಭಿಮಾನಿಗಳು ದಂಗಾಗಿದ್ದರು. ಈ ಆಟ ಕಂಡ ಟೀಂ ಇಂಡಿಯಾದ ಇನ್ನೋರ್ವ ಆಟಗಾರ, ಮಂಗಳೂರು ಮೂಲದ ಕೆ.ಎಲ್ ರಾಹುಲ್ ಬಾರಿ ಎಡ್ಡೆ ಗೊಬ್ಬಿಯ ಸೂರ್ಯ (ತುಂಬಾ ಚೆನ್ನಾಗಿ ಆಟವಾಡಿದೆ) ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೂಲಭಾಷೆ ತುಳುವಿನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ಸೂರ್ಯಕುಮಾರ್ ಯಾದವ್ ಅವರ ಪತ್ನಿ ಕರಾವಳಿ ಮೂಲದವರಾದ ದೀವಿಶಾ ಶೆಟ್ಟಿ, ಚೂರ್ ತುಳು ಕಲ್ಪಾವೊಡು ಆರೆಗ್ ನನ (ಇನ್ನು ಸ್ವಲ್ಪ ತುಳು ಕಲಿಸಬೇಕು ಅವರಿಗೆ) ಎಂದು ದೇವಿಶಾ ಶೆಟ್ಟಿ, ಕೆಎಲ್ ರಾಹುಲ್ ಹಾಕಿದ್ದ ಇನ್’ಸ್ಟಾಗ್ರಾಂ ಪೋಸ್ಟ್ ಬಗ್ಗೆ ಕಮೆಂಡ್ ಹಾಕಿದ್ದರು. ಇದರ ಬೆನ್ನಲ್ಲೇ ರಾಹುಲ್ ಹಾಕಿದ್ದ ಪೋಸ್ಟ್ ಭಾರೀ ವೈರಲ್ ಆಗಿದೆ. ತುಳು ಭಾಷಿಗರೆಲ್ಲ ಈ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಇದೀಗ ತುಳುನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಹುಲ್ ಮತ್ತು ದೀವಿಶಾ ಅವರ ತುಳು ಪ್ರೇಮಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಅವರ ಮಗಳು ತುಳುವಿನಲ್ಲಿ ಮಾತನಾಡುವ ವೀಡಿಯೋ ಒಂದು ವೈರಲ್ ಆಗಿತ್ತು.
ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಶತಕ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 91 ರನ್‍ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಟೀಂ ಇಂಡಿಯಾ 2-1 ಅಂತರದಲ್ಲಿ ಟಿ20 ಸರಣಿ ಗೆದ್ದು ಕೊಂಡಿತ್ತು. ಸೂರ್ಯ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 112 ರನ್ ಚಚ್ಚಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post