ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ಮೇಯರ್ ಜಯಾನಂದ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ 2023-24 ನೆ ಸಾಲಿನ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಡಿಸಿದರು.
2023-24 ನೆ ಸಾಲಿನ ಪ್ರಾರಂಭಿಕ ಶಿಲ್ಕು ರೂ.367.20 ಕೋಟಿ ಮತ್ತು ಆದಾಯ ರೂ.776 ಕೋಟಿ ಒಟ್ಟು ಆದಾಯ ರೂ.1143.61 ಕೋಟಿ .ವೆಚ್ಚ ಸೇರಿ ರೂ.921.57 ಕೋಟಿ ಅಂದಾಜಿಸಲಾಗಿದ್ದು ಅಂತಿಮವಾಗಿ ರೂ.222.04 ಕೋಟಿ ಮಿಗತೆ ಬಜೆಟ್ ನ್ನು ಕಿಶೋರ್ ಕೊಟ್ಟಾರಿ ಸಭೆಗೆ ಮಂಡಿಸಿದರು.
ತುಳುಭಾಷೆ ಅಭಿವೃದ್ಧಿಗೆ ತೌಳವ ಕಾರ್ಯಕ್ರಮ ಆರಂಭಿಸಲು ರೂ.10 ಲಕ್ಷ ತೆಗೆದಿರಿಸಲಾಗಿದೆ. ವಿಜ್ಞಾನಿ/ಸುಜ್ಞಾನಿ ಯೋಜನೆ ಆರಂಭಿಸಿದ್ದು, ಅದಕ್ಕೆ ರೂ.5 ಲಕ್ಷ, ಬೀದಿ ನಾಯಿಗಳ ಹಾಗೂ ಅನಾಥ ಪ್ರಣಿಗಳಿಗಾಗಿ ರಕ್ಷಕ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಅದಕ್ಕೆ ರೂ.25 ಲಕ್ಷ. ಮೀಸಲಿಡಲಾಗಿದೆ. ಹಸಿರು ಮಂಗಳೂರು ಕಾರ್ಯಕ್ರಮದಡಿ ವಾರ್ಡಿಗೊಂದು ಉದ್ಯಾನ ನಿರ್ಮಿಸಲು ರೂ.60 ಲಕ್ಷ ಅನುದಾನ ತೆಗೆದಿಡಲಾಗಿದೆ. ಬಿಬಿಎಂಪಿ ಮಾದರಿಯಲ್ಲಿ ಮಂಗಳೂರು ನಗರದಲ್ಲೂ ‘ಮಂಗಳೂರು ಶ್ರೀಲಕ್ಷ್ಮೀ ಯೋಜನೆ ಆರಂಭಿಲು ಬಜೆಟ್‌ನಲ್ಲಿ ರೂ. 25 ಲಕ್ಷ ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚೊಚ್ಚಲ ಹಾಗೂ ಎರಡನೇ ಹೆರಿಗೆವಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುವ ಬಿಪಿಎಲ್ ಕುಟುಂಬದ ಮಹಿಳೆಯರು ಆ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿ ಇಡುವ ಈ ಸೌಲಭ್ಯ ಪಡೆಯಲು ಅರ್ಹರು ಎಂದು ಕಿಶೋರ್ ತಿಳಿಸಿದ್ದಾರೆ.
ಸ್ವಚ್ಛ ಮಂಗಳೂರು ಕಾರ್ಯಕ್ರಮದ ಜಾಗೃತಿ ಮೂಡಿಸಲು ರೂ.5 ಲಕ್ಷ ಮೀಸಲಿಡಲಾಗಿದೆ. ಕೊಳೆಗೇರಿ ಅಭಿವೃದ್ಧಿ ಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ರೂ. 1 ಕೋಟಿ ಅನುದಾನ ಪಡೆಯುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ. ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ರೂ. 148 ಕೋಟಿ , ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆ ಗೆ ರೂ. 35 ಲಕ್ಷ, ರಾಜಕಾಲುವೆಗಳ ಸಮಗ್ರ ನಿರ್ವಹಣೆಗೆ ರೂ.5 ಕೋಟಿ, ನೀರು ಸರಬರಾಜಿಗೆ ರೂ.32.57 ಕೋಟಿ, ಒಳಚರಂಡಿ ಮಾರ್ಗಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ರೂ.21.65 ಕೋಟಿ ಕಾಯ್ದಿರಿಸಲಾಗಿದೆ.
ಪಾಲಿಕೆಯಲ್ಲಿ ಕಾಗದ ರಹಿತ ಕಚೇರಿ ಕಾರ್ಯಕ್ರಮವನ್ನು ಸಮಗ್ರವಾಗಿ ಅನುಷ್ಠಾನ ಮಾಡುವ ಹಾಗೂ ಎಲ್ಲ ಅರ್ಜಿಗಳನ್ನು ಆನ್‌ಲೈನ್ ನಲ್ಲು ಸಲ್ಲಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವ ಭರವಸೆ ನೀಡಲಾಗಿದೆ. ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ ಹಾಗೂ ಪಾಲಿಕೆ ಅಯುಕ್ತ ಚನ್ನಬಸಪ್ಪ ಕೆ. ಅವರು ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post