ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 3ರಿಂದ ಭಕ್ತಿ ಸಂಭ್ರಮದಿಂದ ಆಯೋಜಿಸಿದ “ಗರಡಿ ಸಂಭ್ರಮ-150′ ಬುಧವಾರ ಬೆಳಗ್ಗೆ ಸಂಪನ್ನಗೊಂಡಿತು. 5 ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ, ದೈವ-ದೇವರ ಪ್ರಸಾದವನ್ನು ಸ್ವೀಕರಿಸಿದರು.
ಕಂಕನಾಡಿ ಕ್ಷೇತ್ರದಲ್ಲಿ ಫಲಪುಷ್ಪಗಳಿಂದ ಅಲಂಕೃತವಾಗಿದ್ದ ಭವ್ಯವೇದಿಕೆಯಲ್ಲಿ ಮನೋಜ್ ಶಾಂತಿ ಮತ್ತು ಬಳಗದವರು ನಾಗಬ್ರಹ್ಮ ಮಂಡಲೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇದಕ್ಕೂ ಮುನ್ನ ಕ್ಷೇತ್ರದಲ್ಲಿ ಹಾಲಿಟ್ಟು ಸೇವೆ ನಡೆಯಿತು. ಕರಾವಳಿಯಾದ್ಯಂತ ನಡೆಯುವ ನಾಗಮಂಡಲೋತ್ಸವವನ್ನು ಬ್ರಾಹ್ಮಣ ಸಮುದಾಯವರೇ ಹೆಚ್ಚಾಗಿ ನೆರವೇರಿಸುತ್ತಾರೆ. ಕಂಕನಾಡಿ ಕ್ಷೇತ್ರದ ನಾಗಬ್ರಹ್ಮ ಮಂಡಲೋತ್ಸವವನ್ನು ಬಿಲ್ಲವ ಸಮುದಾಯದ ನಾಗಪಾತ್ರಿ ಮನೋಜ್ ಶಾಂತಿ ಮತ್ತು ಬಳಗದವರು ನಿರ್ವಹಿಸಿದರು.
ಕ್ಷೇತ್ರಕ್ಕೆ 150 ವರ್ಷ ತುಂಬಿದ ಸಲುವಾಗಿ ಮಾ.3ರಿಂದ ಸಹಸ್ರ ನಾರಿಕೇಳ ಗಣಯಾಗ, ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಗರಡಿಯ ಮೂಲಗಳು ತಿಳಿಸಿವೆ.
ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ. ಅವರು, “ಗರಡಿ ಸಂಭ್ರಮ ನಿರೀಕ್ಷೆಗೂ ಮೀರಿ ಬಹು ಯಶಸ್ಸು ಕಂಡಿದೆ. ಕ್ಷೇತ್ರದ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವ-ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ. ಕ್ಷೇತ್ರದ ಆಡಳಿತ ಮಂಡಳಿ, ಸಂಭ್ರಮ ಉತ್ಸವ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾಡಿನ ವಿವಿಧ ಭಾಗದ ಸ್ವಯಂ ಸೇವಕರು ಹಾಗೂ ಸಂಘ ಸಂಸ್ಥೆಯ ಸಹಕಾರದಿಂದ ಈ ಯಶಸ್ಸು ಲಭಿಸಿದೆ’ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post