ಮಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿದ್ದ ಪರಂಗಿಪೇಟೆ ಕಿದೆಬೆಟ್ಟಿನ ಪಿಯುಸಿ ವಿದ್ಯಾರ್ಥಿ ದಿಗಂತ್ ಎಂಬಾತನ ನಿಗೂಢ ಕಣ್ಮರೆಗೆ ತಿರುವು ಸಿಕ್ಕಿದ್ದು, ಪರೀಕ್ಷಾ ಭೀತಿಯಿಂದ ಮನೆ ತೊರೆದಿದ್ದಾಗಿ ತನಿಖೆಯಲ್ಲಿ ಆತ ಬಾಯಿಬಿಟ್ಟಿರುವುದಾಗಿ ದ.ಕ.ಜಿಲ್ಲಾ ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡಿದ ಅವರು, “ಆತ ಮೊದಲಿಗೆ ತನ್ನನ್ನು ಯಾರೋ ಕರೆದೊಯ್ದಿದ್ದಾಗಿ ಹೇಳಿದ್ದ. ಆದರೆ ಸಮಾಧಾನಿಸಿ ನಿಧಾನವಾಗಿ ಬಾಯಿ ಬಿಡಿಸಿದಾಗ ಪರೀಕ್ಷೆಗೆ ಸರಿಯಾಗಿ ತಯಾರಾಗದಿದ್ದ ಕಾರಣಕ್ಕೆ ಭಯದಿಂದ ಮನೆ ತೊರೆದೆ ಎಂದು ಹೇಳಿದ್ದಾನೆ” ಎಂದರು.
“ಫೆ.25ರಂದು ಸಂಜೆ ವೇಳೆ 500 ರೂ. ಹಣದೊಂದಿಗೆ ಮನೆ ಬಿಟ್ಟವನು, ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬಂದು ಅರ್ಕುಳ ತಲುಪಿದ್ದಾನೆ. ಅಲ್ಲಿ ಮುಖ್ಯರಸ್ತೆಗೆ ಬಂದು ಬೈಕೊಂದರಲ್ಲಿ ಲಿಫ್ಟ್ ಪಡೆದು ಮಂಗಳೂರು ನಗರಕ್ಕೆ ಬಂದಿದ್ದಾನೆ. ಅಲ್ಲಿಂದ ಬಸ್‌ನಲ್ಲಿ ಶಿವಮೊಗ್ಗಕ್ಕೆ ಹೋಗಿದ್ದಾನೆ. ಅಲ್ಲಿ ರೈಲು ಹತ್ತಿ ಮೈಸೂರಿಗೆ ತೆರಳಿದ್ದಾನೆ. ಅಲ್ಲಿಂದ ಕೆಂಗೇರಿಗೆ ಹೋಗಿದ್ದಾನೆ. ಬಳಿಕ ನಂದಿಹಿಲ್ಸ್ ಬೆಟ್ಟಕ್ಕೆ ಹೋಗಿ ಖಾಸಗಿ ರೆಸಾರ್ಟ್ ಒಂದರಲ್ಲಿ 2 ದಿನ ಕೆಲಸ ಮಾಡಿ, ಹಣ ಪಡೆದುಕೊಂಡಿದ್ದಾನೆ. ಬಳಿಕ ವಾಪಸ್ ನಂದಿಹಿಲ್ಸ್‌ನಿಂದ ಕೆಂಗೇರಿ, ಅಲ್ಲಿಂದ ಮೈಸೂರಿಗೆ ಬಂದಿದ್ದಾನೆ. ಅಲ್ಲಿ ಶುಕ್ರವಾರ ರಾತ್ರಿ ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ” ಎಂದು ಅವರು ವಿವರಿಸಿದರು.
“ಉಡುಪಿಯಲ್ಲಿ ತಿನ್ನಲು ಹಾಗೂ ಬಟ್ಟೆ ಖರೀದಿಸಲು ಸ್ಥಳೀಯ ಅಂಗಡಿಗೆ ಹೋಗಿದ್ದಾನೆ. ಅಲ್ಲಿ ಹಣ ಕಡಿಮೆಯಾಗಿ ಓಡಲು ಅನುವಾದಾಗ ಸಿಬ್ಬಂದಿ ತಡೆದು ವಿಚಾರಿಸಿ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ರಕ್ಷಿಸಿದರು. ದ.ಕ. ಜಿಲ್ಲಾ ಪೊಲೀಸರು ಆತನನ್ನು ಕರೆತಂದು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲಾಗಿದೆ. ಇದೀಗ ಬೋಂದೆಲ್ ಬಾಲಗೃಹದಲ್ಲಿ ಇರಿಸಲಾಗಿದೆ. ಹೆತ್ತವರು ಆತನ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ನಾವು ಹೈಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಲಯ ಏನೂ ಸೂಚಿಸಿತ್ತೋ ಅದರಂತೆ ಮುಂದುವರಿಯಲಿದ್ದೇವೆ” ಎಂದು ಎಸ್ಪಿ ಯತೀಶ್ ಹೇಳಿದರು.
ರೈಲ್ವೇ ಟ್ರ್ಯಾಕ್ ಬಳಿ ರಕ್ತದ ಕಲೆ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ ಎಸ್.ಪಿ, ಅವನ ಪಾದದಲ್ಲಿ ಗಾಯವಾಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಆತನೇ ಹೇಳಿದ್ದಾನೆ. ಅವನನ್ನು ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದ. ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ಕಲಿಯುವುದರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಮಂಕಾಗಿದ್ದ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post