ಅಹ್ಮದಾಬಾದ್, ಮಾರ್ಚ್ 8: ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಕ್ರಿಕೆಟ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಮೂರನೇ ಬಾರಿಗೆ ಟ್ವಿ 20 ವಿಶ್ವಕಪ್ ಗೆದ್ದು ನಾವೇ ಟ್ವಿ-ಟ್ವೆಂಟಿ ಮಾಂತ್ರಿಕರು ಎನ್ನುವುದನ್ನು ಭಾರತೀಯ ಕ್ರಿಕೆಟಿಗರು ಸಾಬೀತುಪಡಿಸಿದ್ದಾರೆ. ಭಾನುವಾರ ಅಹ್ಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ 1.3 ಲಕ್ಷ ಕ್ರಿಕೆಟ್ ಅಭಿಮಾನಿಗಳ ನಡುವೆ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಬಳಗ ಟಿ-20 ವರ್ಲ್ಡ್ ಕಪ್ ಗೆದ್ದು ಬೀಗಿದೆ.
ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯ ಗೆದ್ದಿದ್ದ ಭಾರತ ಸೂಪರ್-8 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೇ ಸೋಲನ್ನು ಕಂಡಿತು. ಇಲ್ಲಿಂದ ಪಾಠ ಕಲಿತುಕೊಂಡು ಮುನ್ನುಗ್ಗಿದ ಭಾರತ ಮುಂದಿನ ಪಂದ್ಯಗಳಲ್ಲಿ ಯಾವುದೇ ತಪ್ಪುಗಳನ್ನು ಮಾಡದೇ ಗೆಲುವು ಸಾಧಿಸಿ ಸೆಮಿಸ್ಗೆ ತಲುಪಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿತ್ತು. ಇದೀಗ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತು. ಆರಂಭಿಕ ಮೂವರು ಬ್ಯಾಟರ್ಗಳು ಅರ್ಧಶತಕ ಸಿಡಿಸಿದರು. ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಅಭಿಷೇಕ್ ಶರ್ಮಾ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಕಮ್ಬ್ಯಾಕ್ ಮಾಡಿದರು. ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದರೊಂದಿಗೆ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದರು. 21 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 52 ರನ್ಗಳನ್ನು ಕಲೆಹಾಕಿ ನಿರ್ಗಮಿಸಿದರು.
ಬಳಿಕ ಬಂದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅವರೊಂದಿಗೆ ಸೇರಿ ಭರ್ಜರಿ ಪ್ರದರ್ಶನ ನೀಡಿದರು. ಈ ಇಬ್ಬರು 2ನೇ ವಿಕೆಟ್ಗೆ 48 ಎಸೆತಗಳಲ್ಲಿ 105 ರನ್ಗಳನ್ನು ಕಲೆಹಾಕಿದರು. ಸಂಜು ಸ್ಯಾಮ್ಸನ್ (89) ಕೇವಲ 11 ರನ್ಗಳಿಂದ ಶತಕ ವಂಚಿತರಾದರು. ಅವರು ನಿಶಾಮ್ ಎಸೆತದಲ್ಲಿ ಕ್ಯಾಚೌಟ್ ಆಗಿ ನಿರ್ಗಮಿಸಿದರು. ನಂತರ ಇಶಾನ್ ಕಿಶನ್ (54) ಸಹ ಅರ್ಧಶತಕ ಸಿಡಿಸಿದರು. ಈ ಮೂವರ ಬ್ಯಾಟಿಂಗ್ ಆರ್ಭಟದಿಂದ 16 ಓವರ್ಗಳಲ್ಲಿ ಭಾರತ 204 ರನ್ಗಳನ್ನು ಕಲೆಹಾಕಿತು. ಈ ಮೂವರ ನಿರ್ಗಮನದ ಬೆನ್ನಲ್ಲೆ ಬಂದ ಬ್ಯಾಟರ್ಗಳಲ್ಲಿ ಹಾರ್ದಿಕ್ ಪಾಂಡ್ಯ (18), ಸೂರ್ಯಕುಮಾರ್ ಯಾದವ್ ಡಕೌಟ್ ಆದರು. ಕೊನೆಯಲ್ಲಿ ಶಿವಂ ದುಬೆ 8 ಎಸೆತಗಳಲ್ಲಿ 26 ರನ್ ಬಾರಿಸಿ ತಂಡದ ಸ್ಕೋರ್ 250ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು. ನ್ಯೂಜಿಲೆಂಡ್ ಪರ ನಿಶಾಮ್ 3 ವಿಕೆಟ್ ಪಡೆದರು.
ಭಾರತ ನೀಡಿದ್ದ 256 ರನ್ಗಳ ಬೃಹತ್ ಗುರಿಯನ್ನು ಬೆನ್ನತಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತ್ತು. ಪಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ ಕೇವಲ 2.4 ಓವರ್ಗಳಲ್ಲಿ 31 ರನ್ಗಳನ್ನು ಕಲೆಹಾಕಿದರು. ಈ ವೇಳೆ ಅಕ್ಷರ್ ಪಟೇಲ್ ಬ್ರೇಕ್ ನೀಡಿದರು. ಫಿನ್ ಅಲೆನ್ (9) ವಿಕೆಟ್ ಉರುಳಿಸಿದರು. ಇಲ್ಲಿಂದ ಭಾರತ ಸತತ ವಿಕೆಟ್ಗಳುನ್ನು ಪಡೆಯುತ್ತಾ ಸಾಗಿತು. ಇದರ ಬೆನ್ನಲ್ಲೇ ರಚಿನ್ ರವೀಂದ್ರ (1) ವಿಕೆಟ್ ಪಡೆದರು.
ನಂತರ ಗ್ಲೆನ್ ಫಿಲಿಪ್ಸ್ (5), ಮಾರ್ಕ್ ಚಾಪ್ಮಾನ್ (3) ವಿಕೆಟ್ ನಿರಂತರ ವಿಕೆಟ್ ಕಳೆದುಕೊಂಡರು. ಕೇವಲ 72 ರನ್ಗಳಿಗೆ ತಂಡದ ಅರ್ಧದಷ್ಟು ವಿಕೆಟ್ಗಳು ಉರುಳಿದವು. ನಂತರ ಬಂದವರಲ್ಲಿ ಮಿಚೆಲ್ (17) ನಿಶಾಮ್ (8), ಹೆನ್ರಿ ಡಕೌಟ್ ಆದರು. ತಂಡದ ಪರ ಟಿಮ್ ಸೈಫರ್ಟ್ ಮಾತ್ರ (52) ಅರ್ಧಶತಕ ಸಿಡಿಸಿದರೇ, ಸ್ಯಾಂಟ್ನರ್ (43) ಎರಡನೇ ಹೈಸ್ಕೋರರ್ ಎನಿಸಿಕೊಂಡರು. ಭಾರತದ ಪರ ಬುಮ್ರಾ 4 ವಿಕೆಟ್ ಕಿತ್ತರೇ, ಅಕ್ಷರ್ ಪಟೇಲ್ 3 ವಿಕೆಟ್ ಉರುಳಿಸಿದರು. ಬುಮ್ರಾ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.
Discover more from Coastal Times Kannada
Subscribe to get the latest posts sent to your email.








Discussion about this post