ಮಂಗಳೂರು: ನಗರದ ತೊಕ್ಕೊಟ್ಟು ಫ್ಲೈ ಓವರ್ ಬ್ರಿಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸ್ ತಂಡ ಏಳು ಪ್ರಮುಖ ಆರೋಪಿಗಳನ್ನು ಬಂಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಬುಧವಾರ ತಿಳಿಸಿದ್ದಾರೆ. ರಿಫತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಮತ್ತು ಇರ್ಷಾದ್ ಬಂಧಿತ ಆರೋಪಿಗಳು.
ಕೊಲೆ ನಡೆದ ದಿನ ರಿಫತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಝ್ವಾನ್ ಎಂಬ ಆರು ಮಂದಿ ಆರೋಪಿಗಳು ಆರಿಫ್ ಸಂಚರಿಸುತ್ತಿದ್ದ ಬೈಕ್ ಹಿಂಬಾಲಿಸಿದ್ದರು. ಬಳಿಕ ಕಾರಿನಿಂದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ರಸ್ತೆಗೆ ಬಿದ್ದ ಆರಿಫ್ ಮೇಲೆ ಮಾರಕಾಯುಧಗಳಿಂದ ಮಾರಣಾಂತಿಕ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.
ಇರ್ಷಾದ್ ಎಂಬಾತ ಇವರಿಗೆ ಪ್ರಮುಖ ಸಹಾಯಕನಾಗಿದ್ದ. ಈತ ಕೊಲೆಗೆ ಮುನ್ನ ಆರೋಪಿಗಳಿಗೆ ವಾಸ್ತವ್ಯ ಒದಗಿಸಿ, ಅವರನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಸುಹೈಲ್ ಕೃತ್ಯಕ್ಕೆ ಬಳಸಿರುವ ಬಾಡಿಗೆ ವಾಹನದ ವ್ಯವಸ್ಥೆ ಮಾಡಿದ್ದಾನೆ. ಆ ವಾಹನವನ್ನು ರಿಫತ್‌ಗೆ ಒಪ್ಪಿಸಿ, ತಕ್ಷಣವೇ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ.
ಅರ್ಷಾದ್ ಎಂಬಾತ ಈ ಕೊಲೆ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಆಯುಧಗಳನ್ನು ಒದಗಿಸುವುದರೊಂದಿಗೆ ಹಣಕಾಸು ಸಹಾಯ ಒದಗಿಸಿ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಆತ ಪೊಲೀಸರ ಚಲನವಲನಗಳನ್ನು ಗಮನಿಸಿ ತಕ್ಷಣದ ಮಾಹಿತಿ ಹಂಚಿಕೊಂಡಿದ್ದ.
ಹಿಂದಿನ ಪ್ರಕರಣದ ಸಹ ಆರೋಪಿ ಅಶ್ವೀರ್, ತಾಂತ್ರಿಕ ಸಹಾಯ ನೀಡಿದ್ದು ಪೊಲೀಸರ ನಿಗಾವಳಿಯಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದಾನೆ. ಈತ ದುಬೈನಿಂದ OTPಗಳನ್ನು ಒದಗಿಸಿ, ಆರೋಪಿಗಳು ಭಾರತದಲ್ಲೇ ಅಂತಾರಾಷ್ಟ್ರೀಯ ವಾಟ್ಸ್‌ಆ್ಯಪ್ ಖಾತೆಗಳನ್ನು ಬಳಸುವಂತೆ ಮಾಡಿದ್ದಾನೆ. ಪೊಲೀಸರ ಕಣ್ತಪ್ಪಿಸಿ ಓಡಾಡಲು ಸಹಾಯ ಆಗುವಂತೆ, ಹಳೆಯ ನಂಬರ್‌ಗಳನ್ನು ಪೊಲೀಸರು ಪತ್ತೆ ಮಾಡಿದಾಗ ಹೊಸ ನಂಬರ್ ಗಳನ್ನು ನೀಡುತ್ತಿದ್ದ. ಮಂಗಳೂರು ಮೂಲದ ಮುಸ್ತಫಾ ಮತ್ತು ಅಶ್ವಿರ್ ವಿದೇಶದಲ್ಲಿದ್ದುಕೊಂಡು ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದಾರೆ. ತಲೆಮರೆಸಿಕೊಂಡಿದ್ದ ವೇಳೆ ಅವರ ಪ್ರಯಾಣ, ವಸತಿ ಮತ್ತು ಇತರ ಖರ್ಚು ವೆಚ್ಚಗಳಿಗೆ ಇವರೇ ಹಣಕಾಸಿನ ನೆರವು ನೀಡಿದ್ದಾಗಿ ಪೊಲೀಸರು ಪತ್ತೆ ಮಾಡಿದ್ದಾರೆ.
ಇದುವರೆಗೆ ಆರು ಪ್ರಮುಖ ದಾಳಿಕೋರರು ಮತ್ತು ಇರ್ಷಾದ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ವಿಚಾರಣೆಯಿಂದ ಅಪರಾಧದ ಯೋಜನೆ ಬಹಿರಂಗಗೊಂಡಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post