ಮಂಗಳೂರು: ಎಮ್ಮೆಕೆರೆಯಲ್ಲಿ ನಡೆದಿದ್ದ ಕಕ್ಕೆ ರಾಹುಲ್ ಕೊಲೆ ಪ್ರಕರಣದ ಆರು ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮಹೇಂದ್ರ ಶೆಟ್ಟಿ(27), ಅಕ್ಷಯ್ ಕುಮಾರ್(25), ಸುಶಿತ್(20), ಧಿಲ್ಲೇಶ್ ಬಂಗೇರ (20)ಎನ್ನುವವರು ಪ್ರಮುಖ ಆರೋಪಿಗಳಾಗಿದ್ದು, ಕೃತ್ಯಕ್ಕೆ ಸಹಕರಿಸಿದ ಶುಭಂ (26) ಮತ್ತು ವಿಷ್ಣು(20) ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳು ಮಂಗಳೂರಿನವರೆ ಆಗಿದ್ದಾರೆ. ಬಂಧಿತರಿಂದ ತಲವಾರುಗಳು, ಕತ್ತಿ ಮತ್ತು ಮಾರಕಾಯುಧಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂಧಿತರಿಂದ ಮೂರು ತಲವಾರು, ಕತ್ತಿ ನಾಲ್ಕು, ಚೂರಿ ಮೂರು, ಎರಡು ಸ್ಕೂಟರ್, ರಾಯಲ್ ಎನ್ ಫೀಲ್ಡ್ ಬುಲೆಟ್, ಐದು ಮೊಬೈಲ್ ಹ್ಯಾಂಡ್ ಸೆಟ್ ವಶಕ್ಕೆ ಪಡೆಯಲಾಗಿದೆ. ಶುಭಮ್ ಶೆಟ್ಟಿ ಎಂಬಾತ, ರಾಹುಲ್ ಮೇಲಿನ ದ್ವೇಷದಿಂದ ಆತನನ್ನು ಮುಗಿಸಲು ಸಂಚು ಹೂಡಿದ್ದ. ಇದಕ್ಕಾಗಿ ಕಾರ್ತಿಕ್ ಮತ್ತು ಆತನ ತಮ್ಮ ಭರತ್ ಶೆಟ್ಟಿಯನ್ನು ಎಮ್ಮೆಕೆರೆಗೆ ಕರೆದುಕೊಂಡು ಬಂದು ತಂಡದ ಇತರ ಯುವಕರಿಗೆ ಪರಿಚಯ ಮಾಡಿಸಿದ್ದ. ಅಲ್ಲದೆ, ಎರಡೂ ತಂಡದವರಿಗೆ ಹಲ್ಲೆಗೈದಿರುವ ರಾಹುಲ್ ತಿಂಗಳಾಯ ಎಲ್ಲಿ ಸಿಕ್ಕಿದರೂ, ಕೊಲೆ ಮಾಡಬೇಕು ಎಂದು ಟಾರ್ಗೆಟ್ ಕೊಟ್ಟಿದ್ದ. ಘಟನೆ ನಡೆಸಿದ ಬಳಿಕ ಅಕ್ಷಯ್ ಕುಮಾರ್ ಎಂಬಾತನ ಜೊತೆ ಸೇರಿ ಕೃತ್ಯ ಎಸಗಿದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದ. ಆರೋಪಿ ವಿಷ್ಣು ಇತರರ ಜೊತೆ ಸೇರಿ ಕೃತ್ಯಕ್ಕೆ ಒಳಸಂಚು ರೂಪಿಸಿದ್ದು ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವು ನೀಡಿದ್ದ. ಆರೋಪಿ ಸುಶಿತ್ ಗೆ ಸೇರಿದ ಮೊಬೈಲನ್ನು ತನ್ನ ಜೊತೆಗಿಟ್ಟುಕೊಂಡು ಪರಾರಿಯಾಗಲು ಸಹಕರಿಸಿದ್ದ. ಇದುವರೆಗಿನ ತನಿಖೆಯಲ್ಲಿ ಪ್ರಕರಣದಲ್ಲಿ ಒಟ್ಟು 13 ಮಂದಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಆ ಪೈಕಿ 8 ಮಂದಿ ಅಪರಾಧ ಹಿನ್ನಲೆಯುಳ್ಳವರಾಗಿದ್ದರೆ. ಬಂಧಿತ ಸುಶೀತ್ ಮೇಲೆ ಒಂದು ಕೊಲೆ ಯತ್ನ ಪ್ರಕರಣ , ಅಕ್ಷಯ್ ಕುಮಾರ್ ಮೇಲೆ ಹಲ್ಲೆ ಪ್ರಕರಣ ಈಗಾಗಲೇ ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.