ಮಂಗಳೂರು : ಹೃದ್ರೋಗ ಬಡವ ಶ್ರೀಮಂತರೆನ್ನದೆ ಎಲ್ಲರಿಗೂ ಕಾಡುವ ಕಾಯಿಲೆ. ಈ ಕಾಯಿಲೆಗೆ ಜನರು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿ ಇತ್ತು. ಇದೀಗ ಮಂಗಳೂರಿನಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭವಾಗಿದ್ದು, ಬಡವರಿಗೆ ಆಶಾಕಿರಣವಾಗಿದೆ.
ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭಿಸಿದ್ದು, ಈಗಾಗಲೇ ಹಲವು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ನಿರ್ಮಿಸಿ, ತಜ್ಞ ವೈದ್ಯರು, ನರ್ಸಿಂಗ್ ಸಿಬ್ಬಂದಿ, ತಂತ್ರಜ್ಞರ ನೇಮಕ ಮಾಡಿದ್ದು, ಸ್ಟಂಟ್ ಮತ್ತಿತರ ಔಷಧಗಳನ್ನು ಸರ್ಕಾರ ಪೂರೈಕೆ ಮಾಡುತ್ತಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯ 175 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಹೃದ್ರೋಗ ಚಿಕಿತ್ಸೆಗೆ ಚಾಲನೆ ನೀಡಲಾಗಿದೆ. ಹೊಸ ವ್ಯವಸ್ಥೆಯನ್ನು ಸೆ.21ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದ್ದು, ಸೆ.29ರಂದು ಪ್ರಥಮ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಮಾಡಲಾಗಿತ್ತು.
ಸರ್ಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿಎಆರ್ಕೆ) ಯೋಜನೆ ಮೂಲಕ ಚಿಕಿತ್ಸೆ ನಡೆಯುತ್ತಿದೆ. ಬಿಪಿಎಲ್ ಕಾರ್ಡ್ದಾರರಿಗೆ ಲಭ್ಯ ಚಿಕಿತ್ಸೆಗಳೂ ಉಚಿತವಾಗಿದ್ದು, ಆಂಜಿಯೋ ಗ್ರಾಂಗೆ ಮಾತ್ರ ಎಬಿಆರ್ಕೆಯಲ್ಲಿ ಯಾವುದೇ ಕೋಡ್ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ ದಾರರೂ 5 ಸಾವಿರ ರೂ. ಪಾವತಿಯನ್ನು ಮಾಡಬೇಕಾಗುತ್ತದೆ.
ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರದ ಎಬಿಎಆರ್ಕೆ ಮಂಜೂರಾತಿ ಮೊತ್ತ ನಿಗದಿಪಡಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಮಾಡಿಸಿದವರಿಗೆ ಶೇ.30 ರಿಯಾಯಿತಿ ಮೂಲಕ ಶೇ.70 ಮೊತ್ತ ಪಾವತಿಸಬೇಕು. ಚಿಕಿತ್ಸೆಯು ಎಬಿಎಆರ್ಕೆಯನ್ನೇ ಆಶ್ರಯಿಸಿರುವುರಿಂದ ಮೊತ್ತ ಪಾವತಿ ಅನಿವಾರ್ಯ. ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದ ತಂಡ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದು, ಮುಂದೆ ಫೇಸ್ಮೇಕರ್, ಬ್ರೈನ್ ಆಂಜಿಯೋಗ್ರಾಂ, ಮಕ್ಕಳ ಹೃದಯ ರಂಧ್ರ ಶಸ್ತ್ರಚಿಕಿತ್ಸೆಗೆ ಎಎಸ್ಡಿ ಮತ್ತು ವಿಎಸ್ಡಿ ಮೊದಲಾದ ಚಿಕಿತ್ಸೆ ಲಭಿಸಲಿದೆ.
ಹೃದ್ರೋಗ ಚಿಕಿತ್ಸೆಗೆ ಮೂವರು ತಜ್ಞ ವೈದ್ಯರಿದ್ದು, ನಿಯಮಿತ ಅವಧಿಯ ಸೇವೆ ನೀಡಲಿದ್ದಾರೆ. ಶಸ್ತ್ರಚಿಕಿತ್ಸೆ ನಡೆದು, 24 ಗಂಟೆಯೊಳಗೆ ಎಬಿಆರ್ಕೆಗೆ ದಾಖಲೆ ಮಾಡದಿದ್ದರೆ, ಉಚಿತ ಅಪ್ ಲೋಡ್ ಸೌಲಭ್ಯ ಸಿಗುವುದಿಲ್ಲ.
ಈ ಬಗ್ಗೆ ಮಾತನಾಡಿದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ಅವರು, “ಕ್ಯಾಥ್ ಲ್ಯಾಬ್ ಉದ್ಘಾಟನೆ ಬಳಿಕ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಚಿಕಿತ್ಸೆ ಆರಂಭಿಸಿದ್ದು, ಬಡ, ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲಕರವಾಗಿದೆ. ಎಪಿಎಲ್ ಕಾರ್ಡ್ದಾರರಿಗೂ ಆಯುಷ್ಮಾನ್ ಯೋಜನೆ ಮೂಲಕ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ” ಎಂದರು.
ಕ್ಯಾಥ್ ಲ್ಯಾಬ್ ಮುಖ್ಯಸ್ಥ ಡಾ. ನರಸಿಂಹ ಪೈ ಅವರು ಮಾತನಾಡಿ, “ಅತ್ಯಂತ ಬಡ ಕುಟುಂಬದ ಸೋಮಯ್ಯ ಎಂಬವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದೇವೆ. ಇದು ಹೊಸ ವ್ಯವಸ್ಥೆ. ನಮಗೆ ಸುರಕ್ಷೆ, ಗುಣಮಟ್ಟ ಮತ್ತು ರೋಗಿಯ ಸಂತೃಪ್ತಿ ಮುಖ್ಯ. 8 ಐಸಿಯು, 20 ಕಾರ್ಡಿಯಾಕ್ ಬೆಡ್ಗಳಿವೆ. ಸೂಕ್ತ ಸಮಯದಲ್ಲಿ ಉಪಕರಣಗಳ ಪೂರೈಕೆ ಆಗಬೇಕು. ಬಡವರಿಗೆ ತುಂಬಾ ಅನುಕೂಲವಾಗಲಿದೆ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post