ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್, ಮಂಗಳೂರು ಹಾಗೂ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ (ನಿ) ಬೆಂಗಳೂರು ಇದರ ಅನುದಾನದಲ್ಲಿ ಪಡೀಲ್ ವೃತ್ತದಲ್ಲಿ ಸ್ಥಾಪಿಸಲಾದ ನೂತನ ಆಧುನಿಕ ಮಾರಾಟ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ಮುಂಜಾನೆ ನೆರವೇರಿತು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ದೀಪ ಬೆಳಗಿಸುವ ಮೂಲಕ ನೂತನ ಮಳಿಗೆಗೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ಪಡೀಲ್ ನಲ್ಲಿ ಸರಕಾರದ ಮುಖಾಂತರ ನಿರ್ಮಾಣಗೊಂಡು ಸರಕಾರದ ಮೂಲಕ ಮಾರಾಟ ಮಾಡಲ್ಪಡುವ ಆಧುನಿಕ ಮಳಿಗೆಯನ್ನು ತೆರೆಯಲಾಗಿದೆ. ಇದು ಮುಂದಿನ ದಿನಗಳಲ್ಲಿ ಶುಚಿಯಾದ ತರಕಾರಿ, ಹಣ್ಣುಹಂಪಲುಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಉತ್ತಮ ಅರೋಗ್ಯವನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಹಾಪ್ ಕಾಮ್ಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆಗಳನ್ನು ತೆರೆಯುವ ಮೂಲಕ ಮಂಗಳೂರು ಸ್ಮಾರ್ಟ್ ಸಿಟಿಗೆ ಇನ್ನಷ್ಟು ಪೂರಕವಾಗಿ ಕಾರ್ಯನಿರ್ವಹಿಸಲಿ” ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಕಾರ್ಪೋರೇಟರ್ ರೂಪಶ್ರೀ ಪೂಜಾರಿ ಅವರು, “ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯ ಎನ್ನುವುದು ಅತೀ ಮುಖ್ಯ. ಕೊರೋನ ಬಳಿಕ ನಾವೆಲ್ಲರೂ ಔಷಧಿಯಿಂದ ಬದುಕುವ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹಣ್ಣು, ತರಕಾರಿಗಳನ್ನು ಜನರಿಗೆ ಪೂರೈಸುವ ಹಾಪ್ ಕಾಮ್ಸ್ ಮಳಿಗೆಯನ್ನು ಇಲ್ಲಿ ತೆರೆಯುತ್ತಿರುವುದು ಈ ಭಾಗದ ಜನರಿಗೆ ಪೂರಕವಾಗಲಿದೆ. ಕೊರೋನ ಸಂದರ್ಭದಲ್ಲಿ ರವಿಚಂದ್ರ ಶೆಟ್ಟಿ ಅವರು ನನ್ನ ವಾರ್ಡ್ ನ ಸುಮಾರು 300 ಮಂದಿಗೆ ಆಗುವಷ್ಟು ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದವರು. ಅವರ ಕನಸು ಈ ಮಳಿಗೆಯ ಮೂಲಕ ನೆರವೇರಲಿ. ಹಾಪ್ ಕಾಮ್ಸ್ ಇನ್ನಷ್ಟು ಮಳಿಗೆಗಳನ್ನು ತೆರೆಯಲಿ” ಎಂದರು.
ಮಾತು ಮುಂದುವರಿಸಿದ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಬಿ.ಡಿ. ಭೂಕಾಂತ ಅವರು, “ಇವತ್ತು ಸಹಕಾರಿ ರಂಗದ ಅಡಿಯಲ್ಲಿ ನೂತನ ಮಳಿಗೆ ತೆರೆಯಲ್ಪಟ್ಟಿರುವುದು ಅತೀವ ಸಂತಸ ತಂದಿದೆ. ಇದರಿಂದ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಸಿಗಲಿದೆ. ರೈತರ ಶ್ರಮಕ್ಕೆ ಈ ಮೂಲಕ ಮನ್ನಣೆ ಸಿಗಲಿದೆ” ಎಂದರು.
ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮಾತಾಡುತ್ತಾ, “ಕಳೆದ 15 ದಿನಗಳಲ್ಲಿ ಹಾಲಾಡಿ ಮತ್ತು ಪಡೀಲ್ ನಲ್ಲಿ ಹಾಪ್ ಕಾಮ್ಸ್ ವತಿಯಿಂದ ಎರಡು ಮಳಿಗೆಗಳನ್ನು ತೆರೆಯಲಾಗಿದೆ. ಇದು ನಮಗೆ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸಂಸ್ಥೆಯು 47 ಲಕ್ಷಕ್ಕೂ ಹೆಚ್ಚು ಆದಾಯವನ್ನು ತಂದುಕೊಟ್ಟಿದೆ. ಮುಂದೆ ಇನ್ನಷ್ಟು ಮಳಿಗೆಗಳನ್ನು ಸ್ಥಾಪಿಸಲು ಜನರ ಸಹಕಾರ ಬೇಕು” ಎಂದರು.
ವೇದಿಕೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಬಿ.ಡಿ. ಭೂಕಾಂತ, ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಇದರ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ಕಾರ್ಪೊರೇಟರ್ ರೂಪಶ್ರೀ ಪೂಜಾರಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಕೆ.ಎಚ್.ಎಫ್. ನಿರ್ದೇಶಕ ಕೆ.ಲಕ್ಷ್ಮೀನಾರಾಯಣ ಉಡುಪ, ವ್ಯವಸ್ಥಾಪಕ ನಿರ್ದೇಶಕ ಕೆ. ಪ್ರವೀಣ, ವ್ಯವಸ್ಥಾಪಕ ರವಿಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post