ಹಿಮ್ಮುಖ ವಾಕಿಂಗ್ನ ಪ್ರಯೋಜನಗಳು: ವಾಕಿಂಗ್ ಎಲ್ಲರೂ ಮಾಡಬಹುದಾದ ಸುಲಭ ವ್ಯಾಯಾಮಗಳಲ್ಲಿ ಒಂದು. ಪ್ರತಿದಿನ ಸ್ವಲ್ಪ ಸಮಯ ವಾಕಿಂಗ್ ಮಾಡುವುದರಿಂದ ದೇಹಕ್ಕೆ ಆರೋಗ್ಯಕರ ಮಾತ್ರವಲ್ಲದೆ, ಮಾನಸಿಕ ಶಾಂತಿಯೂ ಲಭಿಸುತ್ತದೆ. ಮಧುಮೇಹ, ರಕ್ತದೊತ್ತಡ, ಕೀಲು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ವಾಕಿಂಗ್ ಸಹಾಯಕ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ನಡಿಗೆಯಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ, ವೇಗದ ವಾಕಿಂಗ್, ಸಾಮಾನ್ಯ ವಾಕಿಂಗ್, ಓಟದ ರೀತಿಯ ವಾಕಿಂಗ್. ಆದ್ರೆ, ನೀವು ಎಂದಾದರೂ ಹಿಮ್ಮುಖವಾಗಿ ವಾಕಿಂಗ್ ಮಾಡಲು ಪ್ರಯತ್ನಿಸಿದ್ದೀರಾ? ಈ ರೀತಿ ವಾಕಿಂಗ್ ಮಾಡುವುದರಿಂದ ಕೆಲವು ವಿಶಿಷ್ಟ ಲಾಭಗಳಿವೆ.
ನಾವು ಸಾಮಾನ್ಯವಾಗಿ ಮುಂದೆ ನಡೆಯುತ್ತೇವೆ. ಆದರೆ, ಹಿಮ್ಮುಖ ನಡಿಗೆ ಎಂದರೆ ಹಿಂದಕ್ಕೆ ನಡೆಯುವುದು. ಸಾಮಾನ್ಯ ನಡಿಗೆಯಲ್ಲಿ ನೀವು ಒಂದು ಹೆಜ್ಜೆ ಮುಂದಿಡುತ್ತಾ ಹೋಗುತ್ತೀರಿ. ಆಗ ಹಿಮ್ಮಡಿ ಮೊದಲು ನೆಲ ಮುಟ್ಟುತ್ತದೆ. ನಂತರ ಇಡೀ ಕಾಲು ನೆಲದ ಮೇಲೆ ಇರುತ್ತದೆ. ಆದರೆ, ಹಿಮ್ಮುಖ ವಾಕಿಂಗ್ನಲ್ಲಿ, ಅದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನೀವು ಹಿಂದೆ ಹೆಜ್ಜೆ ಹಾಕಿದಾಗ ಮೊದಲು ಕಾಲ್ಬೆರಳು ನೆಲ ಮುಟ್ಟುತ್ತದೆ. ಆಗ ಮಾತ್ರ ಇಡೀ ಪಾದ ನೆಲವನ್ನು ಮುಟ್ಟುತ್ತದೆ. ಪ್ರತೀ ಹೆಜ್ಜೆ ಹಿಂದಕ್ಕೆ ಇಡುತ್ತಾ, ಹಿಮ್ಮುಖವಾಗಿ ನಡೆಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.
ಕ್ಯಾಲೊರಿಗಳು ಬರ್ನ್ ಆಗುತ್ತೆ: ತಜ್ಞರು ಹೇಳುವಂತೆ, ಹಿಮ್ಮುಖವಾಗಿ ನಡೆಯುವುದರಿಂದ ಸಾಮಾನ್ಯ ನಡೆಯುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳು ಬರ್ನ್ ಆಗುತ್ತವೆ. ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಪ್ರಕಾರ, ಗಂಟೆಗೆ 3.5 ಮೈಲುಗಳ ಸಾಮಾನ್ಯ ವೇಗದಲ್ಲಿ ವಾಕಿಂಗ್ ಮಾಡುವುದರಿಂದ 4.3 MET ಕ್ಯಾಲೊರಿಗಳು ಸುಡುತ್ತವೆ. ಹಿಮ್ಮುಖವಾಗಿ ವಾಕಿಂಗ್ ಮಾಡುವುದರಿಂದ 6.0 MET ಕ್ಯಾಲೊರಿಗಳು ಬರ್ನ್ ಆಗುತ್ತವೆ ಎಂದು ತಿಳಿದಿದೆ. ವೇಗವಾಗಿ ನಡೆಯುವುದಕ್ಕಿಂತ ರಿವರ್ಸ್ ವಾಕಿಂಗ್ ನಿಮಿಷಕ್ಕೆ ಶೇ 40ಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಆಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.
ಸಂಧಿವಾತ ಇರುವವರಿಗೆ ಉತ್ತಮ: ಈ ಹಿಮ್ಮುಖ ನಡಿಗೆಯು ಅಸ್ಥಿಸಂಧಿವಾತ ಮತ್ತು ಜುವೆನೈಲ್ ರುಮಟಾಯ್ಡ್ ಸಂಧಿವಾತ ಇರುವವರಿಗೆ ಪ್ರಯೋಜನಕಾರಿ. ಇದು ವಿಶೇಷವಾಗಿ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ಮೊಣಕಾಲು, ಬೆನ್ನು ನೋವು ಇರುವವರಿಗೆ ಪರಿಹಾರ ನೀಡುತ್ತದೆ. ಹಿಮ್ಮುಖ ನಡಿಗೆಯು ವಾಕಿಂಗ್ನ ವೇಗ ಹಾಗೂ ಸಮತೋಲನ ಸುಧಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಸ್ಥಿರತೆ ಹೆಚ್ಚಿಸುತ್ತದೆ: ಈ ರೀತಿಯ ವಾಕಿಂಗ್ ಮಾಡುವುದರಿಂದ ವಿಶೇಷವಾಗಿ ತೊಡೆಯ ಹಿಂಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರ ಜೊತೆಗೆ ಸ್ನಾಯುಗಳ ನಡುವಿನ ಸ್ಥಿರತೆ ಮತ್ತು ಸಮನ್ವಯವು ಸುಧಾರಿಸುತ್ತದೆ. ಪರಿಣಾಮವಾಗಿ ಬೀಳುವ ಅಪಾಯ ಕಡಿಮೆಯಾಗುತ್ತದೆ. ಇದು ವಿಶೇಷವಾಗಿ ವಯಸ್ಸಾದವರಿಗೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.
ಕೀಲು ನೋವು ಕಡಿಮೆ ಮಾಡುತ್ತದೆ: ಹಿಮ್ಮುಖ ನಡಿಗೆಯು ಕೀಲುಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನು ನೋವು, ಕುತ್ತಿಗೆ ನೋವು ಹಾಗೂ ಗಾಯಗಳಿಂದ ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಸಮತೋಲನ ಹೆಚ್ಚಾಗುತ್ತದೆ ಹಾಗೂ ದೇಹದ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ ಎಂದು ತಜ್ಞರು ಬಹಿರಂಗಪಡಿಸುತ್ತಾರೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
Discover more from Coastal Times Kannada
Subscribe to get the latest posts sent to your email.
Discussion about this post