ಮಂಗಳೂರು, ಏಪ್ರಿಲ್ 10; ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ ನಡೆಯುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿ ಚೆಂಡು ಉತ್ಸವ ಆಗಿದೆ. ಐದು ದಿನಗಳ ಕಾಲನಡೆಯುವ ಚೆಂಡು ಉತ್ಸವ ಭಕ್ತರ ಆಕರ್ಷಣೆಯ ಕಾರ್ಯಕ್ರಮವಾಗಿದ್ದು, ಕಾಲ್ಚೆಂಡು ಆಟದ ರೀತಿ ದೇವಳದ ಎದುರಿನ ಗದ್ದೆಯಲ್ಲಿ ರಬ್ಬರ್ ಚೆಂಡಿನಲ್ಲಿ ಭಕ್ತರು ಆಟ ಆಡುತ್ತಾರೆ.
ಪುರಾಣದ ಕಥೆಗಳ ಪ್ರಕಾರ ದೇವಿ ಆದಿ ಮಾಯೆ ರಾಕ್ಷಸರ ಸಂಹಾರ ಮಾಡಲು ಭಧ್ರಕಾಳಿಯಾಗಿ ರೂಪುಗೊಂಡು, ಲೋಕಕಂಟಕರಾಗಿ ಮೆರೆಯುತ್ತಿದ್ದ ಚಂಡ-ಮುಂಡ ಎಂಬ ರಾಕ್ಷಸರನ್ನು ವಧೆ ಮಾಡುತ್ತಾಳೆ. ರಾಕ್ಷಸರ ಶಿರವನ್ನು ಬೇರ್ಪಡಿಸಿ ವಧೆಯ ಸಂಭ್ರಮಾಚರಣೆಯನ್ನು ಮಾಡಲು ಚಂಡಮುಂಡರ ರುಂಡವನ್ನು ಚೆಂಡಾಗಿ ಪರಿವರ್ತಿಸಿ ಆಟ ಆಡುತ್ತಾರೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.
ಇದೇ ಹಿನ್ನಲೆಯಲ್ಲಿ ಇಂದಿಗೂ ಪೊಳಲಿ ಜಾತ್ರೋತ್ಸವದ ಐದು ದಿನ ಭಕ್ತರು ದೇವಳದ ಗದ್ದೆಯಲ್ಲಿ ಚೆಂಡಾಟ ಆಡುತ್ತಾರೆ. ‘ಚೆಂಡು ಉತ್ಸವ’ ಎಂದೂ ಕರೆಯಲಾಗುವ ಪೊಳಲಿ ಚೆಂಡು ಹಬ್ಬವು ವಾರ್ಷಿಕ ದೇವಸ್ಥಾನದ ಉತ್ಸವದ ಸಮಯದಲ್ಲಿ ಐದು ದಿನಗಳ ಕಾಲ ನಡೆಯುವ ಜನಪ್ರಿಯ ಚೆಂಡು ಆಟವಾಗಿದೆ.
ಚರ್ಮದ ಚೆಂಡು ಇದಾಗಿದ್ದು, ಮಿಜಾರಿನಲ್ಲಿರುವ ಕಾಬ್ಲರ್ ಕುಟುಂಬದಿಂದ ಮಾಡಲ್ಪಟ್ಟಿದೆ. ಕಡಪು ಕರಿಯಾದಿಂದ ಬಂದ ಎಣ್ಣೆ ಮಿಲ್ಲರ್ ಕುಟುಂಬಕ್ಕೆ ಕಾಬ್ಲರ್ ಕುಟುಂಬದಿಂದ ಚೆಂಡನ್ನು ತರುವ ಜವಾಬ್ದಾರಿಯನ್ನು ನೀಡಲಾಗುತ್ತದೆ. ಪೊಳಲಿ ಜಾತ್ರೆಗೆ ದಿನ ನಿಗದಿಪಡಿಸುವಲ್ಲಿ ಮೂಡುಬಿದಿರೆಯ ಪುತ್ತಿಗೆಯ ಕ್ಷೇತ್ರದ ಪಾತ್ರ ಮುಖ್ಯವಾಗಿದೆ. ಕಳೆದ 16 ವರ್ಷಗಳಿಂದ ಪೊಳಲಿ ಚೆಂಡಿನ ಸಿದ್ಧತೆಯನ್ನು ಶ್ರದ್ಧಾ ಭಕ್ತಿಯಿಂದ ನಿರ್ಮಿಸುತ್ತಿರುವವರು ಮೂಡಬಿದಿರೆಯ ಗಾಂಧಿನಗರದ ಎಂ. ಪದ್ಮನಾಭ ಸಮಗಾರ.
ತಂದೆ ಕೃಷ್ಣ ಸಮಗಾರರರಿಂದ ಬಂದ ಬಳುವಳಿ :
ಎಂ. ಪದ್ಮನಾಭ ಸಮಗಾರ ಅವರು ತಂದೆ ಕೃಷ್ಣ ಸಮಗಾರರರಿಂದ ಬಳುವಳಿಯಾಗಿ ಬಂದ ವೃತ್ತಿ ಕೌಶಲದ ಜತೆಗೆ ಚೆಂಡು ತಯಾರಿಕೆಯನ್ನೂ ಪದ್ಮನಾಭ ಮುಂದುವರಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಗಾಡಿ ಎತ್ತಿನ ದಪ್ಪ ಚರ್ಮವನ್ನು ಬೆಂಗಳೂರಿನಲ್ಲಿ ಶೋಧಿಸಿ, ಮನೆಗೆ ತಂದು ತಮಗೆ ಬೇಕಾದ ರೀತಿಯಲ್ಲಿ ಹದ ಮಾಡಿ ತೆಂಗಿನ ನಾರನ್ನು ಚೆಂಡಿನೊಳಗೆ ನಿರ್ವಾತವಿಲ್ಲದಂತೆ ತುಂಬಿ ಹೊಲಿಯುವ ಚಾಕಚಕ್ಯತೆಗೆ ಅಷ್ಟೇ ಶ್ರಮವಿದೆ.
ಮೊದಲು ವೃತ್ತಕಾರದ ಚರ್ಮವನ್ನು ಕತ್ತರಿಸಿ ಅರ್ಧ ಗೋಲಾಕಾರವಾಗಿ ರೂಪಿಸುವ ಹಂತದಲ್ಲಿ ಪುಟ್ಟ ಒನಕೆಯಿಂದ ಚರ್ಮವನ್ನು ಗುದ್ದಿ ಹದ ಮಾಡಬೇಕಾಗುತ್ತದೆ. ಹೀಗೆ ಎರಡು ಅರ್ಧ ಗೋಲಾಕಾರದ ಬಟ್ಟಲುಗಳು ತಯಾರಾದ ಬಳಿಕ ಎರಡನ್ನೂ ಚರ್ಮದ ದಾರದಿಂದಲೇ ಆರ್ಧಾಂಶ ಹೋಲಿಯಲಾಗುತ್ತದೆ.
ತೆಂಗಿನ ನಾರನ್ನು ನೀರು ಹನಿಸಿ ಒದ್ದೆ ಮಾಡಿ ಈ ಗೋಲದೊಳಗೆ ತುರುಕಿ ಮತ್ತೆ ಒತ್ತಡ ಹಾಕಿ ಗುದ್ದಬೇಕು. ಹೀಗೆ ಗುದ್ದಿ ಗಟ್ಟಿಗೊಳಿಸುವಾಗ ಎಲ್ಲಿಯೂ ಗೋಲದೊಳಗೆ ಖಾಲಿ ಜಾಗ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಸ್ವಲ್ಪ ಚಪ್ಪಟ್ಟೆಯಾದ ಚೆಂಡು ತಯಾರಾಗುತ್ತದೆ. ಇದನ್ನು ಸಂಬಂಧಪಟ್ಟವರು ಒಯ್ದ ನಂತರ ಎಣ್ಣೆ ಕೊಡುತ್ತಾರೆ. ಆಗ ಪೂರ್ತಿಯಾಗಿ ಚೆಂಡಿನಾಕಾರಕ್ಕೆ ಬರುತ್ತದೆ. ಹೀಗೆ ಜಿಲ್ಲೆಯ ಹತ್ತು ಹಲವು ಧಾರ್ಮಿಕ ಕ್ಷೇತ್ರಗಳಿಗೆ ಚೆಂಡು ತಯಾರಿಸಿಕೊಡುವ ಅವಕಾಶ ಪಡೆದಿರುವ ಪದ್ಮನಾಭ ಅಪರೂಪದ ಸಾಧಕರಾಗಿದ್ದಾರೆ.
ಪೊಳಲಿ ಸೇರಿದಂತೆ ಜಿಲ್ಲೆಯ ಸುಮಾರು 18 ಕ್ಷೇತ್ರಗಳಿಗೆ ಅಲ್ಲಿನ ವಾರ್ಷಿಕ ಜಾತ್ರೆಗಳಿಗೆ ಚರ್ಮದ ಚೆಂಡು ಒದಗಿಸುತ್ತಾ ಬಂದಿದ್ದಾರೆ ಎಂ. ಪದ್ಮನಾಭ ಸಮಗಾರ. ಅದರಲ್ಲಿ ಪೊಳಲಿ ಚೆಂಡು ದೊಡ್ಡ ಗಾತ್ರದ್ದು. ವಾಮಂಜೂರಿನ ಅಮೃತೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ, ಬೆಳುವಾಯಿ ನಡ್ಯೋಡಿಗೆ ಮತ್ತು ಸಾಣೂರು. ಕೋಟೆಬಾಗಿಲು, ಮೂಡುಬಿದರೆಯ ಆದಿಶಕ್ತಿ ಮಹಾದೇವಿ ಮತ್ತು ಮಹಾಕಾಳಿ ದೇವಸ್ಥಾನಗಳು, ಮಲ್ಲೂರು, ಅಮ್ಟಾಡಿ, ಇರುವೈಲು, ಮುಚ್ಚೂರು, ಮಾರ್ನಾಡು, ಅಳಿಯೂರು, ಅಶ್ವತ್ಥಪುರ, ಪಾಲಡ್ಕ ಹೀಗೆ ವಿವಿಧೆಡೆ ಹಲವು ಗಾತ್ರದ ಚೆಂಡುಗಳನ್ನು ಒದಗಿಸುತ್ತಾರೆ.