ಮಂಗಳೂರು: ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮ ಸಮಾವೇಶ. ನಿರಂತರವಾಗಿ 25 ವರ್ಷಗಳ ಕಾಲ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಗುಂಪುಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಸ್ತ್ರೀಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಈ ಕಾಯಕದ ರೂವಾರಿಯಾದ ಎಂಎನ್ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸುತ್ತೇನೆ. ಸ್ವ ಸಹಾಯ ಸಂಘಗಳ ಮೂಲಕ ಮಹಿಳಾ ಸಶಕ್ತತೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ. ಯುದ್ಧ ಸಂಘರ್ಷದ ಈ ಸಂದರ್ಭದಲ್ಲಿ ಸೈನಿಕರ ಕಲ್ಯಾಣ ನಿಧಿಗೆ 3 ಕೋಟಿ ರೂಪಾಯಿ ದೇಣಿಗೆ ನೀಡಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಶ್ಲಾಘಿಸುವುದಾಗಿ ರಾಜ್ಯಪಾಲ ಗೆಹ್ಲೋಟ್ ತಿಳಿಸಿದರು.
ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 8 ಜಿಲ್ಲೆಗಳ ಒಂದೂವರೆ ಲಕ್ಷಕ್ಕೂ ಅಧಿಕ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸ್ಪೀಕರ್ ಯುಟಿ ಖಾದರ್ ಸಹಕಾರಿ ಧ್ವಜವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಜಸಂಭ್ರಮ ಉದ್ಘಾಟಿಸಿದರು.
ರಜತ ಸಂಭ್ರಮ ಸಮಾವೇಶ ವನ್ನು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿ ಮಾತನಾಡುತ್ತಾ, 25ವರ್ಷಗಳ ಹಿಂದೆ ನಾನು ಉದ್ಘಾಟಿಸಿರುವುದು ಸಂತೋಷ ತಂದಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲು ರಾಜೇಂದ್ರ ಕುಮಾರ್ ಮಾಡಿದ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷಾಂತರ ಮಹಿಳೆಯರು ಕುಟುಂಬದ ಶಕ್ತಿಯಾಗಿ ದೇಶದ ಅಭಿವೃದ್ಧಿಗಾಗಿ ಸ್ವ ಸಹಾಯ ಸಂಘಗಳ ಮೂಲಕ ಕೊಡುಗೆ ನೀಡುತ್ತಿದ್ದಾರೆ. ಸಹಕಾರಿ ರಂಗದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ದೇಶದ ಗಡಿಯಲ್ಲಿ ವೀರಯೋಧರಿಗೆ ಗೌರವ ಸಲ್ಲಿಸಿ ಯೋಧರ ಕಲ್ಯಾಣ ನಿಧಿಗೆ 3 ಕೋಟಿ ರೂ. ದೇಣಿಗೆ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. 25 ವರ್ಷದ ಹಿಂದೆ ಸ್ಥಾಪನೆಯಾದ ಸ್ವ ಸಹಾಯ ಗುಂಪುಗಳು ರಾಜ್ಯದ 9 ಜಿಲ್ಲೆಗಳಲ್ಲಿ ಬೆಳೆದಿದೆ. ಮುಂದೆ ಇತರ ಜಿಲ್ಲೆಗೂ ವಿಸ್ತರಿಸುವ ಗುರಿ ಇದೆ ಎಂದರು.
ರಜತ ಸಂಭ್ರಮದ ‘ಸಂತೃಪ್ತಿ’ ಸ್ಮರಣ ಸಂಚಿಕೆಯನ್ನು ರಾಜ್ಯ ಸಭಾ ಸದಸ್ಯ, ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಮಾತನಾಡಿ, ಸ್ವ ಸಹಾಯ ಸಂಘ ಮಹಿಳೆಯರ ಬೆಳವಣಿಗೆಗೆ ಒಂದು ಅವಕಾಶ ನೀಡಿದಂತಾಗಿದೆ. ಸಂಘಟನೆ ಉದ್ದೇಶ ಅರಿತು ಬೆಳೆಯಬೇಕು. ಈ ಸಂಘಟನೆ ಈ ರೀತಿ ಬೆಳೆಯಲು ಕಾರಣರಾದ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು.
ಸಮಾವೇಶದಲ್ಲಿ ನೀಲಿ ಬಣ್ಣದ ಸೀರೆ ಧರಿಸಿದ ನವೋದಯ ಸ್ವ ಸಹಾಯ ಗುಂಪುಗಳ ಸದಸ್ಯರು ಸಮಾವೇಶದ ಮೆರುಗು ಹೆಚ್ಚಿಸಿದರು. ದಕ್ಷಿಣ ಕನ್ನಡ ಪೊಲೀಸ್ ಬ್ಯಾಂಡ್ ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಿದರು. ಸಮಾರಂಭದಲ್ಲಿ ಡಾ.ಎಂಎನ್.ರಾಜೇಂದ್ರ ಕುಮಾರ್, ಅರುಣಾ ರಾಜೇಂದ್ರ ಕುಮಾರ್ ದಂಪತಿಗಳನ್ನು ನವೋದಯ ಸ್ವ ಸಹಾಯ ಸಂಘಗಳ ಸದಸ್ಯರು ಗೌರವಿಸಿ ಸನ್ಮಾನಿಸಿದರು.
ವೇದಿಕೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಇಫ್ಕೋ ಸಂಸ್ಥೆಯ ಉದಯ ಶಂಕರ್ ಅವಸ್ತಿ, ಶಾಸಕರಾದ ಸುನಿಲ್ ಕುಮಾರ್, ಅಶೋಕ್ ಕುಮಾರ್ ರೈ, ಡಾ.ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಎಂಎಲ್ ಸಿಗಳಾದ ಐವನ್ ಡಿಸೋಜಾ, ಎಸ್.ಎಲ್.ಭೋಜೇಗೌಡ, ಬಂಟರ ಸಂಘದ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಯುವ ಮುಖಂಡರಾದ ಮಿಥುನ್ ರೈ, ಇನಾಯತ್ ಅಲಿ, ಸಂಜೀವ ಮಠಂದೂರು, ಆರ್.ಪದ್ಮರಾಜ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಕ್ಷಿತ್ ಶಿವರಾಂ, ಕಿಶೋರ್ ಆಳ್ವ, ಡಾ.ಮೋಹನ್ ಆಳ್ವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ದೇವರಾಜ್, ಡಾ.ಪಿ.ಎಲ್.ಧರ್ಮ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post